ರಾಜ್ಯದಲ್ಲಿ ನವೆಂಬರ್ 21 ರಂದು ಹಿಂದಿ ಹೇರಿಕೆ ವಿರುದ್ದ ಚಳುವಳಿ: ವಾಟಾಳ್ ನಾಗರಾಜ್

ಮೈಸೂರು : ರಾಜ್ಯದಲ್ಲಿ ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಮೈಸೂರಿನಲ್ಲಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ವೃತ್ತದ ಬಳಿ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಹಿಂದಿ ಭಾಷೆ ವಿರುದ್ಧ ಕರಾಳ ದಿನ ಆಚರಣೆ ಮಾಡಲಾಗುತ್ತದೆ. ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ನವೆಂಬರ್ 21 ರಿಂದ ಹಿಂದಿ ವಿರೋಧಿ ಚಳುವಳಿ ನಡೆಸಲಾಗುತ್ತದೆ. ನವೆಂಬರ್ 21 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದೆ ಎಂದರು.
ಹೋರಾಟಕ್ಕೆ ಕರ್ನಾಟಕದ ಜನರು ಬೆಂಬಲ ನೀಡುವಂತೆಯೂ ಕರೆ ನೀಡಿದರು. ಬ್ಯಾಂಕ್ ನಲ್ಲಿ ಹಿಂದಿ ಬರಹದ ಚೆಕ್ ಕೊಡ್ತಾರೆ. ಬ್ಯಾಂಕ್ ಗಳಿಗೆ ಕನ್ನಡಿಗರ ಹಣ ಬೇಕು, ಆದರೆ ಕನ್ನಡ ಭಾಷೆ ಬೇಡ. ಇದರ ವಿರುದ್ಧ ಬ್ಯಾಂಕ್ ಗಳಿಗೆ ನುಗ್ಗುತೇವೆ. ರಾಜ್ಯದ ಸಂಸದರು ಹಿಂದಿಯ ವಿರುದ್ಧ ಲೋಕಸಭೆಯಲ್ಲಿ ಮಾತನಾಡಬೇಕು. ಹಿಂದಿಯ ವಿರುದ್ಧ ಇಡೀ ರಾಜ್ಯ ಒಂದಾಗಬೇಕಾಗಿದೆ. ಹಿಂದಿ ಹೇರಿಕೆಯಿಂದ ಕನ್ನಡ ಬೆಳೆಯಲ್ಲ, ಕನ್ನಡಕ್ಕೆ ಅವಮಾನ ಆಗುತ್ತೆ ಎಂದರು.
ರಾಜ್ಯದಲ್ಲಿ ಗುಜರಾತಿ, ತಮಿಳು, ಮಲಯಾಳಿಗಳು ತಿಂದು ತೇಗುತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದಿ ಪ್ರಬಲ ಆಗಿ ಕನ್ನಡ ಪತ್ರಿಕೋದ್ಯಮಕ್ಕೆ ಅಪಾಯ ಆಗುತ್ತೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹಿಂದಿ ಹೀರಿಕೆ ವಿರುದ್ದ ಕ್ರಿಯಾ ಸಮಿತಿ ರಚನೆ ಮಾಡುತ್ತೇವೆ. ರಾಜ್ಯದಲ್ಲಿ ಹಿಂದಿ ಹೇರಿಕೆಯಲ್ಲಿ ಬಿಜೆಪಿ, ಆರ್.ಎಸ್.ಎಸ್ ಪಾತ್ರ ಇದೆ. ಸರ್ಕಾರಿ ಸಮಾರಂಭದಲ್ಲಿ ಕನ್ನಡದಲ್ಲಿ ನಡೆಯಬೇಕು ಎಂದರು.
ಕನ್ನಡ ಬಿಟ್ಟು ಯಾವುದೇ ಸಮಾರಂಭ ನಡೆಸಿದ್ರೆ ನಾವು ನುಗ್ಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇನ್ನೂ ಗ್ರಾಮ ಪಂಚಾಯತ್ ಸದಸ್ಯರ ಸಂಬಳ ಕೇವಲ ಒಂದು ಸಾವಿರ. ಇದು ನಿಜಕ್ಕೂ ಅಗೌರವ, ಕನಿಷ್ಠ ಸಂಬಳ 5 ಸಾವಿರ ನೀಡಬೇಕು. ಗ್ರಾಮ ಪಂಚಾಯತಿಗಳಿಗಳಿಗೆ ಹಣ ಬಿಡುಗಡೆ ಮಾಡಬೇಕು. ಇದರ ವಿರುದ್ದ ಮೈಸೂರು ಚಾಮರಾಜನಗರ ತಾಲೂಕಿನ ಕಾರ್ಯಾಲಯಗಳ ಬಳಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು.



