ಅನಿತಾ ರಾಜಕಾರಣದಿಂದ ಹಿಂದಕ್ಕೆ: ನಿಖಿಲ್ ಪಟ್ಟಾಭಿಷೇಕಕ್ಕೆ ಸಿದ್ಧತೆ

ರಾಮನಗರ: ಸಕ್ರಿಯ ರಾಜಕಾರಣದಿಂದ ಮಾಜಿ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಹಿಂದೆ ಸರಿಯಲಿದ್ದಾರೆ ಎನ್ನುವ ಮಾತು ಈಗ ಮುನ್ನಲೆಗೆ ಬಂದಿದೆ. ಇದರೊಂದಿಗೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅವರ ಸ್ಥಾನಕ್ಕೆ ಪಟ್ಟಾಭಿಷೇಕಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಹೌದು, ಮುಂಬರುವ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುವುದಿಲ್ಲವೆಂದು ಬುಧವಾರ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಕರೆದಿದ್ದ ಕನ್ನಡಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಘೋಷಣೆ ಮಾಡಿದ್ದರು. ಇದರಿಂದ ತಾಯಿ ಬದಲಾಗಿ ಮಗ ಆ ಸ್ಥಾನ ತುಂಬುತ್ತಾರೆನ್ನುವುದನ್ನು ಈ ಹೇಳಿಕೆ ಪುಷ್ಠಿ ಸಿಕ್ಕಿದೆ.
ಕಳೆದ ಒಂದು ವರ್ಷದ ಹಿಂದಿನಿಂದಲೂ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಮಾತುಗಳು ಮುಖಂಡರು ಮತ್ತು ಕಾರ್ಯಕರ್ತರಿಂದ ಕೇಳಿ ಬರುತ್ತಿತ್ತು. ಅದರಂತೆ ನಿಖಿಲ್ ಕೂಡ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಮುಂದೆ ಅವರೇ ನಮ್ಮ ಅಭ್ಯರ್ಥಿ ಎಂದು ಮುಖಂಡರ ನಂಬಿಕೆಗೆ ಎಚ್ಡಿಕೆ ನೀಡಿರುವ ಹೇಳಿಕೆಯಿಂದ ನಿಖಿಲ್ ಸ್ಪರ್ಧೆ ಖಚಿತವೆನ್ನಲಾಗುತ್ತಿದೆ.
ನಿಖಿಲ್ ಸ್ಪರ್ಧೆ ಬಗ್ಗೆ ಬಹುತೇಕ ಸಂದರ್ಭಗಳಲ್ಲಿ ಯಾವುದೇ ಗುಟ್ಟು ಬಿಟ್ಟುಕೊಡದಿದ್ದ ಕುಮಾರಸ್ವಾಮಿ, ಸಮಯ ಬಂದಾಗ ನಮ್ಮ ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ ಎಂದು ಹೇಳುತ್ತಲೇ ಬರುತ್ತಿದ್ದರು. ಈಗ ಅವರೇ ಅನಿತಾ ಸ್ಪರ್ಧೆ ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಇಲ್ಲ ಎಂದೇಳುವ ಮೂಲಕ ಕಾರ್ಯಕರ್ತರ ಇಚ್ಚೆಯಂತೆ ಪುತ್ರನನ್ನು ಮುಂಚೂಣಿಗೆ ಬರುವಂತೆ ನೋಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಪರಾಭವಗೊಂಡರೂ, ರಾಜ್ಯ ಜೆಡಿಎಸ್ ಯುವ ಘಟಕ ಅಧ್ಯಕ್ಷ ಸ್ಥಾನ ವಹಿಸಿಕೊಂಡು, ರಾಜಕಾರಣದಲ್ಲಿ ಮತ್ತಷ್ಡು ಸಕ್ರಿಯವಾಗಿರುವ ನಿಖಿಲ್, ಕೆಲ ಸರ್ಕಾರಿ ಕಾರ್ಯಕ್ರಮಗಳನ್ನು ಹೊರತು ಪಡಿಸಿದರೇ ಬೇರೆ ಕಾರ್ಯಕ್ರಮಗಳಲ್ಲಿ ಅನಿತಾ ಸಕ್ರಿಯರಾಗಿಲ್ಲ. ಇದು ಕಾರ್ಯಕರ್ತರಲ್ಲೂ ಅಸಮಾಧಾನಕ್ಕೂ ಕಾರಣವಾಗಿತ್ತು. ಆದರೇ ಈ ಸ್ಥಾನವನ್ನು ಕಳೆದ ಒಂದೂವರೆ ವರ್ಷದಿಂದ ಸಾರ್ವಜನಿಕ ಕಾರ್ಯಕ್ರಮಗಳು, ಮುಖಂಡರ ಸುಖ-ದುಃಖದ ಕಾರ್ಯಕ್ರಮಗಳಲ್ಲಿ ಹೆಚ್ವೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ- ಚನ್ನಪಟ್ಟಣ ಎರಡು ಕ್ಷೇತ್ರಗಳಿಂದ ಆಯ್ಕೆಯಾದ ಕುಮಾರಸ್ವಾಮಿ ಅವರು, ಚನ್ನಪಟ್ಟಣವನ್ನು ಉಳಿಸಿಕೊಂಡು, ರಾಮನಗರ ತೊರೆದಿದ್ದರು. ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅನಿತಾ ಕಣಕ್ಕಿಳಿದು ಜಯಭೇರಿ ಭಾರಿಸಿದ್ದರು. ಆಗ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದುದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಅಲ್ಲದೇ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಎಂಎಲ್ಸಿ ಸಿ.ಎಂ.ಲಿಂಗಪ್ಪ ಅವರ ಪುತ್ರ ಎಲ್. ಚಂದ್ರಶೇಖರ್ ನಿವೃತ್ತಿ ಘೋಷಿಸಿ, ಮರಳಿ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದರು.
ಒಟ್ಟಾರೆ, ಕಳೆದ ಎರಡು ದಶಕದಿಂದ ರಾಮನಗರ ಕ್ಷೇತ್ರ ಗೌಡರ ಕುಟುಂಬದ ವಶದಲಿದ್ದು, ಭದ್ರಕೋಟೆ ಉಳಿಸಿಕೊಳ್ಳಲು ತಮ್ಮ ಕುಟುಂದ ಕುಡಿಯನ್ನೇ ಮುಂಬರುವ ಚುನಾವಣೆಯಲ್ಲಿ ಕಣಕ್ಕಿಳಿಸಲು ತಾಲೀಮು ನಡೆಸಲಾಗುತ್ತಿದೆ.



