ಅಫ್ಘನ್ ಹೆಣ್ಣುಮಕ್ಕಳಿಗಾಗಿ ಮಿಡಿದ ನಟಿ ಏಂಜೆಲಿನಾ ಜೋಲಿ

ಬೆಂಗಳೂರು: ಖ್ಯಾತ ಹಾಲಿವುಡ್ ನಟಿ ಏಂಜೆಲಿನಾ ಜೋಲಿ ಸಾಮಾಜಿಕ ಮಾಧ್ಯಮ ವೇದಿಕೆಯಾದ ಇನ್‌ಸ್ಟಾಗ್ರಾಮ್‌ನಲ್ಲಿ ಶನಿವಾರ ಖಾತೆ ತೆರೆದಿದ್ದಾರೆ. ಮೂಲಭೂತ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರಪಂಚದಾದ್ಯಂತದ ಕಥೆಗಳು ಮತ್ತು ಧ್ವನಿಗಳನ್ನು ಹಂಚಿಕೊಳ್ಳಲು ಈ ವೇದಿಕೆಗೆ ಬಂದಿರುವುದಾಗಿ 46 ವರ್ಷದ ನಟಿ ಹೇಳಿಕೊಂಡಿದ್ದಾರೆ.
ತಮ್ಮ ಮೊದಲ ಪೋಸ್ಟ್‌ನಲ್ಲಿ ಅವರು ಮತ್ತೆ ತಾಲಿಬಾನಿನಿಗಳ ಪಾಲಾದ ಅಫ್ಘಾನಿಸ್ತಾನದ ಹದಿಹರೆಯದ ಹುಡುಗಿಯೊಬ್ಬಳ ಕೈಬರಹದ ಪತ್ರದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಫ್ಗಾನ್ ಹುಡುಗಿ ತನ್ನ ಭಯ ಮತ್ತು ಅಸಹಾಯಕತೆಯನ್ನು ಹೇಳಿಕೊಂಡಿರುವ ಪತ್ರ ಅದು. “20 ವರ್ಷಗಳ ಬಳಿಕ ಮತ್ತೆ ನಮ್ಮೆಲ್ಲರ ಪಾಲಿಗೆ ಹಕ್ಕುಗಳು ಇಲ್ಲವಾಗಿವೆ. ನಮ್ಮೆಲ್ಲರ ಜೀವನವನ್ನು ಕತ್ತಲೆ ಆವರಿಸಿದೆ. ನಾವೆಲ್ಲರೂ ಸ್ವಾತಂತ್ರ್ಯವನ್ನು ಕಳೆದುಕೊಂಡು ಮತ್ತೆ ಸೆರೆಮನೆಯಲ್ಲಿದ್ದೇವೆ” ಎಂದು ಅಫ್ಗಾನ್ ಹುಡುಗಿ ಬರೆದುಕೊಂಡಿದ್ದಾಳೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪತ್ರವನ್ನು ಹಂಚಿಕೊಂಡಿರುವ ಜೋಲಿ ಹೀಗೆ ಬರೆದಿದ್ದಾರೆ: “ಇದು ನನಗೆ ಅಫ್ಘಾನಿಸ್ತಾನದ ಹದಿಹರೆಯದ ಹುಡುಗಿಯಿಂದ ಬಂದಿರುವ ಪತ್ರ. ಅಫ್ಘಾನಿಸ್ತಾನದ ಜನರು ಸಾಮಾಜಿಕ ಮಾಧ್ಯಮದಲ್ಲಿ ಸಂವಹನ ನಡೆಸುವ ಮತ್ತು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸನ್ನಿವೆಶವನ್ನು ಕಳೆದುಕೊಂಡಿದ್ದಾರೆ. ನಾನು ಅವರ ಕಥೆಗಳನ್ನು ಹಂಚಿಕೊಳ್ಳಲು ಮತ್ತು ತಮ್ಮ ಮೂಲಭೂತ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರಪಂಚದಾದ್ಯಂತದವರ ಧ್ವನಿಯನ್ನು ಹಂಚಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ.”
20 ವರ್ಷಗಳ ಹಿಂದೆ ಅಂದರೆ 2011ರಲ್ಲಿ ಡಬ್ಲ್ಯೂಟಿಸಿ ಮೇಲಿನ ದಾಳಿಗೆ ಎರಡು ವಾರಗಳ ಮೊದಲು ಅಫ್ಘಾನಿಸ್ತಾನದ ಗಡಿಯಲ್ಲಿದ್ದಾಗ ಅಫ್ಘಾನ್ ನಿರಾಶ್ರಿತರನ್ನು ಭೇಟಿಯಾಗಿದ್ದುದನ್ನು ನೆನಪಿಸಿಕೊಂಡಿರುವ ಜೋಲಿ, “ತಮ್ಮ ದೇಶವನ್ನು ಆವರಿಸಿರುವ ಭಯ ಮತ್ತು ಅನಿಶ್ಚಿತತೆಯಿಂದಾಗಿ ಮತ್ತೊಮ್ಮೆ ಆಫ್ಘನ್ನರು ಸ್ಥಳಾಂತರಗೊಳ್ಳುವುದನ್ನು ನೋಡುವುದಕ್ಕೆ ಸಂಕಟವಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಅಫ್ಘಾನ್ ನಿರಾಶ್ರಿತರನ್ನು “ವಿಶ್ವದ ಅತ್ಯಂತ ಸಮರ್ಥರಲ್ಲಿ ಕೆಲವರು” ಎಂದು ಕರೆದಿರುವ ಜೋಲಿ, ಆ ನಿರಾಶ್ರಿತರನ್ನು ಹೊರೆಯಂತೆ ಪರಿಗಣಿಸುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ತುಂಬಾ ಸಮಯ ಮತ್ತು ಹಣವನ್ನು ಖರ್ಚು ಮಾಡಿಯೂ ಅದು ರಕ್ತಪಾತ ಮತ್ತು ಜೀವಗಳನ್ನು ತೆಗೆಯುವಲ್ಲಿಗೇ ಬಂದು ನಿಲ್ಲುತ್ತದೆಂದಾದರೆ ಬಹುದೊಡ್ಡ ವೈಫಲ್ಯ” ಎಂದು ಬರೆದಿದ್ದಾರೆ.
ಅಫ್ಘಾನ್ ನಿರಾಶ್ರಿತರಿಗೆ ನೆರವಾಗುವ ಹಾದಿಯಿಂದ ನಾನು ವಿಮುಖಳಾಗುವುದಿಲ್ಲ. ಅವರ ಬೆನ್ನಿಗೆ ನಿಲ್ಲುವುದಕ್ಕಾಗಿ ಎಲ್ಲ ಮಾರ್ಗಗಳನ್ನು ಹುಡುಕುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರಿಯಲಿದೆ ಎಂದು ಹೇಳುವುದರೊಂದಿಗೆ ಅವರು ತಮ್ಮ ಟಿಪ್ಪಣಿ ಮುಗಿಸಿದ್ದಾರೆ.
ಅಮೆರಿಕಾ ಸೇನೆ ಅಫ್ಘಾನಿಸ್ತಾನದಿಂದ ನಿರ್ಗಮಿಸಿದ ಬೆನ್ನಲ್ಲೇ ತಾಲಿಬಾನಿಗಳು ಕಳೆದ ವಾರ ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಮತ್ತೆ ತಾಲಿಬಾನ್ ಪಾಲಾಗುತ್ತಿದ್ದಂತೆ ದೇಶದಲ್ಲಿ ಶರಿಯಾ ಮತ್ತು ಇಸ್ಲಾಮಿಕ್ ಧಾರ್ಮಿಕ ಕಾನೂನುಗಳು ತಮ್ಮ ಮೇಲೆ ಹೇರಲ್ಪಡುತ್ತವೆ ಎಂಬುದು ಬಹುತೇಖ ಆಫ್ಘನ್ನರು, ಅದರಲ್ಲೂ ಮಹಿಳೆಯರ ಆತಂಕವಾಗಿದೆ. 1996-2001ರವರೆಗಿ ತಾಲಿಬಾನ್ ಆಳ್ವಿಕೆ ವೇಳೆಯೂ ಮಹಿಳೆಯರು ಕೆಲಸ ಮಾಡಲು ಅವಕಾಶವಿರಲಿಲ್ಲ. ಮಾತ್ರವಲ್ಲ, ಕಲ್ಲೆಸೆತ, ಚಾವಟಿ ಮತ್ತು ಗಲ್ಲಿಗೇರಿಸುವಂತಹ ಶಿಕ್ಷೆಗಳನ್ನು ನೀಡಲಾಗಿತ್ತು. ಮತ್ತೆ ಅಂಥದೇ ಕರಾಳ ದಿನಗಳು ಬಂದುಬಿಡುವ ಭಯವೇ ಇಡೀ ದೇಶವನ್ನೀಗ ಆವರಿಸಿದೆ.
