ಕಲಬುರ್ಗಿ ಜನರಿಗೆ ಅಪ್ಪು ಕೊಟ್ಟ ಮಾತು ನೇರವೇರಲಿಲ್ಲ: ವಿಧಿಯಾಟಕ್ಕೆ ಹಿಡಿಶಾಪ ಹಾಕಿದ ಜನತೆ

ಕಲಬುರ್ಗಿ: ಕಲಬುರ್ಗಿಯಲ್ಲಿ ಒಂದು ಶೂಟಿಂಗ್ ನಡಿಯುತ್ತೆ, ಆಗ ನಾನು ಯಾರ ಸಹಕಾರ ಕೇಳಲ್ಲ ನಿಮ್ಮ ಸಹಕಾರ ಕೇಳ್ತೆನೆ. ನೀವು ಎದುರು ನಿಂತು ನಡೆಸಿಕೊಡಬೇಕು. ಇದು ಪವರಸ್ಟಾರ ಅಪ್ಪು ಕಳೆದಬಾರಿ ಕಲಬುರ್ಗಿಗೆ ಬಂದಾಗ ಹೇಳಿದ ಮಾತು.
ಕಳೆದ ಮಾರ್ಚ್ 21ರಂದು ಯುವರತ್ನ ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ್ದ ವೇಳೆಯಲ್ಲಿ ಕಲಬುರ್ಗಿ ಜನ ಅವರನ್ನು ಮನೆ ಮಗನಂತೆ ಬರಮಾಡಿಕೊಂಡಿದ್ದರು. ಕೋವಿಡ್ ಹಿನ್ನಲೆ ಅಬ್ಬರದ ಪ್ರಚಾರಕ್ಕೆ ಜಿಲ್ಲಾಢಳಿತ ಅನುಮತಿ ನೀಡಿರಲಿಲ್ಲ ಹೀಗಾಗಿ ಶರಣಬಸವೇಶ್ವರ ದೇವಸ್ಥಾನಕ್ಕೆ ಪುನೀತ ಭೇಟಿ ನೀಡಿದ್ದರು. ಈ ವೇಳೆ 12 ಜೆಸಿಬಿಗಳ ಮೂಲಕ ಅಪ್ಪು ಅವರಿಗೆ ಪುಷ್ಪಾರ್ಚನೆ ಮಾಡಲಾಗಿತ್ತು.
ಇಲ್ಲಿನ ಜನರ ಪ್ರೀತಿ ಕಂಡು ಕಲಬುರ್ಗಿಯಲ್ಲಿ ಸಿನೇಮಾ ಮಾಡುವ ತವಕವನ್ನು ಅಪ್ಪು ಹೇಳಿಕೊಂಡಿದ್ದರು. ನಮ್ಮ ಜಿಲ್ಲೆಯಲ್ಲಿ ನೆಚ್ಚಿನ ನಾಯಕನ ಸಿನೇಮಾ ಶೂಟಿಂಗ್ ನೋಡಬಹುದು. ಆ ದಿನ ಆದಷ್ಟು ಬೇಗ ಬರಲಿ ಅಂತ ಎದುರು ನೋಡುತ್ತಿದ್ದ ಜನರಿಗೆ ಈಗ ನಿರಾಸೆಯಾಗಿದೆ. ಅಪ್ಪು ತಾವು ಕೊಟ್ಟ ಮಾತು ನೇರವೇರಲು ವಿಧಿ ಅವಕಾಶ ಕೊಡಲಿಲ್ಲ, ಕಲಬುರ್ಗಿ ಜನರ ಮನೆ ಮಗನಂತಾಗಿದ್ದ ಅಪ್ಪು, ಬಾರದ ಲೋಕಕ್ಕೆ ಹೋಗಿರುವ ವಿಷಯದಿಂದ ಇಲ್ಲಿನ ಜನ ಕಣ್ಣಿರು ಹರಿಸಿದ್ದಾರೆ.



