
ಇತ್ತೀಚಿಗೆ ಧನ್ವೀರ್ ಮತ್ತು ಶ್ರೀಲೀಲಾ ಅಭಿನಯಿಸಿರುವ ಬೈ ಟು ಲವ್ ಸಿನಿಮಾ ರಿಲೀಸ್ ಆಗಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಈ ನಡುವೆ ನಾಯಕ ಧನ್ವೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟ ಧನ್ವೀರ್ ಗೌಡ ತಮ್ಮ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಯುವಕ ಧನ್ವೀರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅನುಪಮಾ ಚಿತ್ರಮಂದಿರದ ಬಳಿ ತಮ್ಮ ಮೇಲೆ ನಟ ಧನ್ವೀರ್ ಹಾಗೂ ಅವರ ಬೌನ್ಸರ್ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ಹೆಸರಿನ ಯುವಕ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಧನ್ವೀರ್ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಭಾಗದಂತೆ ಈ ಘಟನೆ ಕಾಣುತ್ತಿದೆ ಎಂದಿದ್ದಾರೆ.
ಯಾರೋ ಹಿಂದೆ ನಿಂತು ಇದನ್ನೆಲ್ಲ ಮಾಡಿಸುತ್ತಿದ್ದಾರೆ ಎನಿಸುತ್ತಿದೆ. ಘಟನೆ ನಡೆದಿದ್ದು ಗುರುವಾರ ರಾತ್ರಿ ಅಂದು ದೂರು ದಾಖಲಾಗಿಲ್ಲ. ಸಿನಿಮಾ ಬಿಡುಗಡೆ ಆಗಿ ಒಂದು ಶೋ ಆದ ಬಳಿಕ ದೂರು ದಾಖಲಾಗುತ್ತದೆ. ದೂರು ದಾಖಲಿಸಿದ ವ್ಯಕ್ತಿ ರಾತ್ರಿಯೆಲ್ಲ ಆರಾಮವಾಗಿರುತ್ತಾನೆ, ಪೊಲೀಸ್ ಠಾಣೆಯಲ್ಲಿಯೂ ಆರಾಮವಾಗಿರುತ್ತಾನೆ. ಶುಕ್ರವಾರ ಮಧ್ಯಾಹ್ನದ ವೇಳೆ ತಾನೇ ಹೋಗಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಾನೆ ಇದನ್ನೆಲ್ಲ ನಂಬಲು ಸಾಧ್ಯವೇ? ಎಂದು ಧನ್ವೀರ್ ಪ್ರಶ್ನೆ ಮಾಡಿದ್ದಾರೆ.



