ನಿಶ್ಚಿತಾರ್ಥಕ್ಕೆ ಹೊರಟ್ಟಿದ್ದ ಬಸ್ ಅಪಘಾತ: 7 ಮಂದಿ ಸಾವು

ಚಿತ್ತೂರು: ಮದುವೆ ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ಬಸ್ ಮಗುಚಿ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 45ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ-ತಿರುಪತಿ ಹೆದ್ದಾರಿ ಸಮೀಪದ ಬಕರಾಪೇಟಾ ಕಣುಮಾ ಎಂಬಲ್ಲಿ ನಡೆದಿದೆ.
ಮೃತರನ್ನು ಮಾಲಿಶೆಟ್ಟಿ ವೆಂಗಪ್ಪ, ಮಾಲಿಶೆಟ್ಟಿ ಮುರಳಿ, ಕಾಂತಮ್ಮ, ಮಾಲಿಶೆಟ್ಟಿ ಗಣೇಶ್, ಯಶಸ್ವಿನಿ, ಚಾಲಕ ರಸೂಲ್ ಹಾಗೂ ಕ್ಲೀನರ್ ಎಂದು ಗುರುತಿಸಿಲಾಗಿದೆ. ಬಸ್ ನಲ್ಲಿ ಒಟ್ಟು 63 ಮಂದಿ ಪ್ರಯಾಣಿಸುತ್ತಿದ್ದು ಅತಿ ವೇಗದ ಚಾಲನೆಯೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.
ಅನಂತಪುರ ಜಿಲ್ಲೆಯ ಧರ್ಮಾವರಂನ ರಾಜೇಂದ್ರ ನಗರದ ವೇಣು ಅವರ ನಿಶ್ಚಿತಾರ್ಥ ಚಿತ್ತೂರು ಜಿಲ್ಲೆಯ ನಾರಾಯಣವರಂ ಮೂಲದ ಯುವತಿ ಜೊತೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದ್ರೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಎದುರಾಗಿದೆ.
ವರನ ಕುಟುಂಬದ ಸುಮಾರು 63 ಮಂದಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು, ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದರಿಂದ ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ, ಸುಮಾರು 100 ಅಡಿಯ ಕಣಿವೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು,45ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದ್ದು, ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
