
ಮುಜಾಫರ್‌ಪುರ(ಬಿಹಾರ): ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಿರುವ ಆಸ್ಪತ್ರೆಯೊಂದರಲ್ಲಿ ಆಗಿರುವ ಪ್ರಮಾದದಲ್ಲಿ 15ಕ್ಕೂ ಹೆಚ್ಚು ಮಂದಿ ದೃಷ್ಟಿ ಕಳೆದುಕೊಂಡಿರುವ ಘಟನೆ ಉತ್ತರ ಬಿಹಾರದ ಮುಜಾಫರ್‌ಪುರ ಕಣ್ಣಿನ ಆಸ್ಪತ್ರೆಯಲ್ಲಿ ನಡೆದಿದೆ.
ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ತಂಡ ರಚಿಸಲಾಗಿದೆ ಎಂದು ಸಿವಿಲ್ ಸರ್ಜನ್ ವಿನಯ್ ಕುಮಾರ್ ಶರ್ಮಾ ಹೇಳಿದ್ದು, ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿರುವ ಫಲಾನುಭವಿಗಳ ಪಟ್ಟಿಯನ್ನು ಕೇಳಲಾಗಿದೆ. ಈಗಾಗಲೇ 15 ಮಂದಿಗೆ ಶಸ್ತ್ರಚಿಕಿತ್ಸೆ ಬಳಿಕ ಆಗಿರುವ ಸಮಸ್ಯೆಯಿಂದ ದೃಷ್ಟಿ ನಾಶವಾಗಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಕಳೆದ ನ.22ರಂದು 65 ಮಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಈ ಪೈಕಿ ಕೆಲ ಮಂದಿಯಲ್ಲಿ ಸಮಸ್ಯೆ ಕಂಡುಬಂದಿದೆ. ನಾಲ್ಕು ಮಂದಿಯ ದೃಷ್ಟಿ ಸೋಂಕಿನ ಕಾರಣದಿಂದ ನಾಶವಾಗಿದೆ. ಇತರರ ದೃಷ್ಟಿ ಉಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪರಿಣತರಾದ ವೈದ್ಯರೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ.
ಉಚಿತ ಶಸ್ತ್ರ ಚಿಕಿತ್ಸಾ ಶಿಬಿರದ ವೇಳೆ ನೈರ್ಮಲ್ಯ ಕಾಪಾಡದಿರುವ ಬಗ್ಗೆಯಾಗಲೀ, ಪ್ರತೀ ವೈದ್ಯರು ಎಷ್ಟು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಆಡಳಿತ ಮಂಡಳಿಯಿಂದ ಸಮರ್ಪಕವಾದ ಉತ್ತರ ಬಂದಿಲ್ಲ. ಒಟ್ಟು 250 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ತೊಂದರೆಗೊಳಗಾದವರು ಬಹುತೇಕ ಜಿಲ್ಲೆಯ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಬಡವರು ಹಾಗೂ ಗ್ರಾಮಸ್ಥರು ಎನ್ನಲಾಗಿದೆ.
ಮಾಜಿ ಸಂಸದ ಪಪ್ಪು ಯಾದವ್ ಆಸ್ಪತ್ರೆಗೆ ಭೇಟಿ ನೀಡಿ, ಘಟನೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ದೃಷ್ಟಿ ಕಳೆದುಕೊಂಡ ರೋಗಿಗಳಿಗೆ ತಲಾ 2 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.



