ಮನರಂಜನೆಸಿನಿಮಾಸೆಲೆಬ್ರಿಟಿ

ಅಲೆವೂರು ಗಣಪನ ಆಶೀರ್ವಾದ ಪಡೆದ ನಿಮ್ಮೆಲ್ಲರ ಆಶೀರ್ವಾದ ಚಿತ್ರ ತಂಡ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಲೆವೂರಿನ ಗಣೇಶೋತ್ಸವದ ಕೊನೆಯ ದಿನ ಇಂದು “ನಿಮ್ಮೆಲ್ಲರ ಆಶೀರ್ವಾದ” ಚಿತ್ರ ತಂಡ ಗಣಪನ ಆಶೀರ್ವಾದ ಪಡೆದರು.

ಕನ್ನಡದ ಹೊಸ ನಿರ್ಮಾಣ ಸಂಸ್ಥೆ ‘ವರುಣ್‌ ಸಿನಿ ಕ್ರಿಯೇಷನ್ಸ್’‌, ಹೊಸ ಕನ್ನಡ ಚಲನಚಿತ್ರವೊಂದನ್ನು ನಿರ್ಮಿಸುತ್ತಿದೆ. ಚಿತ್ರಕ್ಕೆ ‘ನಿಮ್ಮೆಲ್ಲರ ಆಶೀರ್ವಾದ’ ಎಂಬ ಹೆಸರನ್ನು ಇಡಲಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ತಂಡ ಕೆಲಸ ಮಾಡುತ್ತಿದೆ. ಚಿತ್ರವನ್ನು ವರುಣ್‌ ಹೆಗ್ಡೆ ನಿರ್ಮಿಸಿದ್ದಾರೆ. ಯುವ ನಿರ್ದೇಶಕ ರವಿಕಿರಣ್ ರಚನೆ ನಿರ್ದೇಶನ ಮಾಡಿದ್ದಾರೆ.

ಚಿತ್ರದ ನಾಯಕ ನಟಿಯಾಗಿ ‘ಭಿನ್ನʼ ಸಿನಿಮಾ ಖ್ಯಾತಿಯ ಪಾಯಲ್‌ ರಾಧಾಕೃಷ್ಣ ಅಭಿನಯಿಸಿದ್ದಾರೆ. ನಾಯಕ ನಟನಾಗಿ ಪ್ರತೀಕ್‌ ಶೆಟ್ಟಿ ಹೊಸ ಪರಿಚಯ ಆಗಲಿದ್ದಾರೆ. ಚಿತ್ರರಂಗದ ಹಿರಿಯ ಮತ್ತು ಅನುಭವಿ ನಟರುಗಳಾದ ಎಂ.ಎನ್.‌ ಲಕ್ಷ್ಮೀದೇವಿ, ಅರವಿಂದ ಬೋಳಾರ್‌, ಗೋವಿಂದೇಗೌಡ, ಸ್ವಾತಿ ಗುರುದತ್‌, ದಿನೇಶ್‌ ಮಂಗಳೂರು ಮತ್ತಿತರರು ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ನಿಮ್ಮೆಲ್ಲರ ಆಶೀರ್ವಾದ’ ಚಲನಚಿತ್ರವು ಕೌಟುಂಬಿಕ ಕಥಾಹಂದರ ಹೊಂದಿದ್ದು, ಪೋಲಿಸ್ ಅಧಿಕಾರಿ ಒಬ್ಬನ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ತೆರೆದಿಡುವಂತಿದೆ. ಕೆಲಸವನ್ನು ಕಷ್ಟಪಟ್ಟು ಮಾಡುವವ ಅದನ್ನು ಇಷ್ಟ ಪಡುವಂತೆ ಆಗುವುದನ್ನು ಮಾನವ ಸಂಬಂಧಗಳ ನೆಲೆಯಲ್ಲಿ ನಿರೂಪಿಸಲಾಗಿದೆ. ತಿಳಿ ಹಾಸ್ಯದೊಂದಿಗೆ ಸಾಗುವ ಚಿತ್ರ ಸರಳ ಮತ್ತು ಸಹಜವಾಗಿ ರೂಪುಗೊಂಡಿದೆ. ಸಂಪೂರ್ಣ ಚಿತ್ರವನ್ನು ಕರಾವಳಿಯ ಹಿನ್ನೆಲೆಯಲ್ಲಿ ಚಿತ್ರಿಸಲಾಗಿರುವುದು ಮತ್ತೊಂದು ವಿಶೇಷ.

ಚಿತ್ರಕ್ಕೆ ಸರವಣನ್‌ ಜಿ.ಎನ್.‌ ಛಾಯಾಗ್ರಹಣ ಮಾಡಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರೂಪೇಂದ್ರ ಆಚಾರ್‌ ಕಲಾ ನಿರ್ದೇಶನದ ಕೆಲಸ ಮಾಡಿದ್ದಾರೆ. ಸುನಾದ್‌ ಗೌತಮ್ ಸಂಗೀತ ಮತ್ತು ವಿವೇಕ್‌ ಚಕ್ರವರ್ತಿ ಹಿನ್ನೆಲೆ ಸಂಗೀತ ಚಿತ್ರದ ಜೊತೆಯಾಗಲಿದೆ. ರಾಜ್ಯ ಪ್ರಶಸ್ತಿ ವಿಜೇತ ಸಂಕಲನಕಾರ, ಸುರೇಶ್‌ ಆರುಮುಗಂ ಎಡಿಟಿಂಗ್‌ ಕೆಲಸ ಚಿತ್ರದ ಅಂದ ಹೆಚ್ಚಿಸಲಿದೆ.

ಲಾಕ್‌ಡೌನ್‌ ಅವಧಿಗೂ ಮೊದಲು ಚಲನಚಿತ್ರದ ಪ್ರೊಡಕ್ಷನ್‌ ಕೆಲಸಗಳು ಮುಗಿದಿದ್ದವು. ಕರಾವಳಿಯ ವಿವಿಧ ಭಾಗಗಳಲ್ಲಿ ಚಿತ್ರದ ಶೂಟಿಂಗ್‌ ನಡೆಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಸರ್ಕಾರದ ನಿಯಮಾನುಸಾರ ನಡೆಯುತ್ತಿದೆ. ಮುಂದಿನ ನಿರ್ಧಾರಗಳನ್ನು ಚಿತ್ರತಂಡ ಶೀಘ್ರವೇ ಹಂಚಿಕೊಳ್ಳಲಿದೆ. ಇನ್ನು ಒಂದೆರಡು ತಿಂಗಳಲ್ಲಿ ರೆಲೀಸ್ ಮಾಡಲಿದ್ದೇವೆ ಎಂದು ನಿರ್ಮಾಪಕ ವರುಣ್ ಹೆಗ್ಡೆ ಅವರು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button