ಹೊಸ ಸಿನಿಮಾದಲ್ಲಿ ಕ್ರೇಜಿಸ್ಟಾರ್: ರಾಮಸ್ವಾಮಿಯಾದ ಕನಸುಗಾರ

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ದೃಶ್ಯ 2 ಹಾಗೂ ಕನ್ನಡಿಗ ಸಿನಿಮಾಗಳು ಕಳೆದ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬಂದಿವೆ. ದೃಶ್ಯ 2 ಥಿಯೇಟರ್ನಲ್ಲಿ ಕಮಾಲ್ ಮಾಡಿದ್ರೆ ಕನ್ನಡಿಗ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಿತ್ತು. ಇದೀಗ ರವಿಮಾಮನ ಹೊಸ ಸಿನಿಮಾವೊಂದು ಅನೌನ್ಸ್ ಆಗಿದ್ದು ಚಿ.ಗುರುದತ್ ನಿರ್ದೇಶನ ಮಾಡ್ತಿದ್ದಾರೆ.
ರವಿಚಂದ್ರನ್ ನಟನೆಯ ಸಿನಿಮಾಗಳು ಟೈಟಲ್ನಲ್ಲಿಯೇ ಸದ್ದು ಮಾಡೋದು ಗೊತ್ತೆ ಇದೆ. ಇದೀಗ ಕನಸುಗಾರನ ಹೊಸ ಸಿನಿಮಾಗೆ ರಮ್ಯ ರಾಮಸ್ವಾಮಿ ಎಂದು ಟೈಟಲ್ ಇಡಲಾಗಿದೆ. ರವಿಚಂದ್ರನ್ ಜೊತೆ ಆತ್ಮಿಯ ಒಡನಾಟ ಹೊಂದಿರುವ ನಿರ್ಮಾಪಕ ಎನ್.ಎಸ್.ರಾಜ್ಕುಮಾರ್ ತಮ್ಮ ಓಂಕಾರ್ ಫಿಲ್ಮಂಸ್ ಬ್ಯಾನರ್ ಅಡಿಯಲ್ಲಿ ರಮ್ಯ ರಾಮಸ್ವಾಮಿ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.
ಈ ಹಿಂದೆ ಪೃಥ್ವಿ, ಮೈನಾ, ಮೈತ್ರಿ ಹಾಗೂ ಕನ್ನಡಿಗದಂತಹ ಸದಭಿರುಚಿಯ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಎನ್.ಎಸ್.ರಾಜ್ಕುಮಾರ್ ಇದೀಗ ರಮ್ಯ ರಾಮಸ್ವಾಮಿ ಸಿನಿಮಾಗೆ ಬಂಡವಾಳ ಹೂಡ್ತಿದ್ದಾರೆ.
ರಮ್ಯ ರಾಮಸ್ವಾಮಿ ಚಿತ್ರಕ್ಕೆ ಚಿ.ಗುರುದತ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಹಿಂದೆ ಸಮರ, ದತ್ತ, ಕಾಮಣ್ಣನ ಮಕ್ಕಳು, ಕಿಚ್ಚ ಹುಚ್ಚದಂತಹ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ಚಿ.ಗುರುದತ್ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್ಕುಮಾರ್ ನಟನೆಯ ಸಿನಿಮಾಗೆ ಚಿ.ಗುರುದತ್ ನಿರ್ದೇಶನ ಮಾಡ್ತಾರೆ ಎಂದು ಸುದ್ದಿಯಾಗಿತ್ತು. ಈ ಚಿತ್ರವನ್ನ ಸಂದೇಶ್ ನಾಗರಾಜ್ ನಿರ್ಮಾಣ ಮಾಡಲಿದ್ದಾರೆ.
ರಾಮಸ್ವಾಮಿ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದು ರಮ್ಯ ಪಾತ್ರಕ್ಕೆ ಯಾರು ಬಣ್ಣ ಹಚ್ಚುತ್ತಾರೆ ಅನ್ನೋ ಕುತೂಹಲ ಶುರುವಾಗಿದೆ. ಮೂಲಗಳ ಪ್ರಕಾರ ರಮ್ಯ ಪಾತ್ರದಲ್ಲಿ ನಟಿಸಲು ಖ್ಯಾತ ನಟಿಯೊಬ್ಬರು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.



