ಪ್ರೇಮ್ ಜೊತೆ ಕೈಜೋಡಿಸಿದ ಧೃವ ಸರ್ಜಾ

ನಿರ್ದೇಶಕ ಜೋಗಿ ಪ್ರೇಮ್ ಮತ್ತೆ ರೌಡಿಸಂ ಹಿನ್ನೆಲೆಯ ಕಥೆಯನ್ನ ಕೈಗೆತ್ತಿಕೊಂಡಿದ್ದಾರೆ. ಈಗಾಗ್ಲೆ ಜೋಗಿ, ಜೋಗಯ್ಯ, ಕರಿಯಾ ಹೀಗೆ ಸಾಲು ಸಾಲು ರೌಡಿಸಂ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಸೂಪರ್ ಸಕ್ಸಸ್ ಕಂಡಿರೋ ಪ್ರೇಮ್ ಮತ್ತೆ ಹೊಸ ಕಥೆಯೊಂದಿಗೆ ಅಭಿಮಾನಿಗಳ ಮುಂದೆ ಬರಲು ಸಿದ್ದವಾಗಿದ್ದಾರೆ.
ಇತ್ತೀಚೆಗಷ್ಟೇ ಏಕ್ ಲವ್ ಯಾ ಸಿನಿಮಾದ ಸಕ್ಸಸ್ ನಲ್ಲಿರೋ ಪ್ರೇಮ್ ಇದೀಗ ನಟ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. 70ರ ದಶಕದಲ್ಲಿನ ಬೆಂಗಳೂರಿನ ರೌಡಿಸಂ ಕಥೆಯನ್ನ ತೆರೆ ಮೇಲೆ ತರೋಕೆ ನಿರ್ದೇಶಕರು ಸಜ್ಜಾಗಿದ್ದಾರೆ. ಚಿತ್ರದ ಕಥೆಯಲ್ಲಿ ಬರುವ ಬಹುತೇಕ ಪಾತ್ರಗಳು ನೈಜ ಘಟನೆಗಳಿಗೆ ಸಾಕ್ಷಿ ಆಗಿವೆಯಂತೆ.
ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಮುಂದಿನ ತಿಂಗಳು ಅರಮನೆ ಮುಂದೆ ಅದ್ದೂರಿ ಕಾರ್ಯಕ್ರಮ ಮಾಡಿ ಟೈಟಲ್ ಬಿಡುಗಡೆ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ. ಈಗಾಗ್ಲೆ ಬೆಂಗಳೂರಿನ ಭೂಗತ ಜಗತ್ತಿನ ಅನೇಕ ಕಥೆಗಳು ಸಿನಿಮಾ ಮಾಡಲಾಗಿದ್ದು, ಭೂಗತ ಲೋಕದ ಸಾಕಷ್ಟು ಮಂದಿಯ ಜೀವನವು ತೆರೆ ಮೇಲೆ ಬಂದಿದೆ. ಹೀಗಾಗಿ ಸದ್ಯ ಪ್ರೇಮ್ ಆಯ್ಕೆ ಮಾಡಿಕೊಂಡಿರುವ ಪಾತ್ರದ ಕುರಿತಾಗಿ ಸಹಜವಾಗಿಯೇ ಕುತೂಹಲ ಕ್ರಿಯೇಟ್ ಮಾಡಿದೆ.
ಚಿತ್ರಕ್ಕಾಗಿ ನಿರ್ದೇಶಕರು 70ರ ದಶಕದ ಬೆಂಗಳೂರಿನ ಚಿತ್ರಣವನ್ನ ಮರುಸೃಷ್ಟಿ ಮಾಡಲಿದ್ದಾರೆ. ಜೊತೆಗೆ ನಟ ಧ್ರುವ ಸರ್ಜಾ ಕೂಡ 70ರ ದಶಕದ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.




