ಕಡು ಬಡತನದಲ್ಲೂ ಪುನೀತ್ಗಾಗಿ ಅದ್ದೂರಿ ಕಾರ್ಯಕ್ರಮ ಮಾಡಿದ ದಂಪತಿಗಳು

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ಇನ್ನೆರಡು ದಿನ ಕಳೆದ್ರೆ ಮೂರು ತಿಂಗಳಾಗುತ್ತಿದೆ. ಆದ್ರೆ ಅಪ್ಪು ಇಲ್ಲ ಅನ್ನೋ ಸತ್ಯವನ್ನ ಅರಗಿಸಿಕೊಳ್ಳೋಕೆ ಇಂದಿಗೂ ಲಕ್ಷಾಂತರ ಮಂದಿಗೆ ಸಾಧ್ಯವಾಗ್ತಿಲ್ಲ. ನಿತ್ಯ ಪುನೀತ್ ಹೆಸರನ್ನ ಜಪಿಸುತ್ತಿರೋ ಅಭಿಮಾನಿಗಳು ಅಪ್ಪು ಅವರನ್ನ ಅಮರವಾಗಿಸಲು ಸಾಕಷ್ಟು ಸಮಾಜ ಮುಖಿ ಕೆಲಸಳನ್ನ ಮಾಡ್ತಿದ್ದಾರೆ.
ನಟ ಪುನೀತ್ ರಾಜ್ಕುಮಾರ್ರಿಂದ ಪ್ರೇರಣೆ ಪಡೆದು ಅದೆಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಪುನೀತ್ ಎಂದು ನಾಮಕರಣ ಮಾಡಿದ್ದಾರೆ. ಅಂತೆಯೇ ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಗ್ರಾಮದ ಪಕ್ಕೀರಪ್ಪ ಹಾಗೂ ಪಾರ್ವತಿ ದಂಪತಿಗಳು ಕಡು ಬಡತನದಲ್ಲೂ ತಮ್ಮ ಮಗನಿಗೆ ಅದ್ದೂರಿಯಾಗಿ ನಾಮಕರಣ ಮಾಡಿ ಪುನೀತ್ ಎಂದು ಹೆಸರಿಟ್ಟಿದ್ದಾರೆ.
ಪಕ್ಕೀರಪ್ಪ ಹಾಗೂ ಪಾರ್ವತಿ ದಂಪತಿಗಳು ನಟ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಗಳು. ಪುನೀತ್ರನ್ನ ಕಳೆದುಕೊಂಡ ನೋವು ಈ ದಂಪತಿಗಳನ್ನ ಇಂದಿಗೂ ಕಾಡುತ್ತಿದೆ. ಪುನೀತ್ ನೆನಪನ್ನ ಸದಾ ಹಸಿರಾಗಿಡಲು, ಜೊತೆಗೆ ಅಪ್ಪು ಮೇಲಿನ ಅಭಿಮಾನಕ್ಕೆ ಈ ದಂಪತಿ ತಮ್ಮ ಮಗನಿಗೆ ಪುನೀತ್ ಎಂದು ನಾಮಕರಣ ಮಾಡಿದ್ದಾರೆ.
ಕಡು ಬಡತನದ ನಡುವೆಯೂ ಅದ್ದೂರಿಯಾಗಿ ನಾಮಕರಣ ಮಾಡಿದ ದಂಪತಿಗಳು ರಸಮಂಜರಿ ಕಾರ್ಯಕ್ರಮವನ್ನೂ ಆಯೋಜಿಸದ್ದರು. ಅಪ್ಪು ಮೇಲಿನ ಅಭಿಮಾನಕ್ಕಾಗಿ ಈ ಕಾರ್ಯ ಮಾಡಿರುವ ದಂಪತಿಗಳಿಗೆ ಬಡತನ ಅಡ್ಡಿ ಆಗಿಲ್ಲವಂತೆ. ದಂಪತಿಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.




