ರಾಜ್ ಕನಸಿನ ಶಕ್ತಿಧಾಮಕ್ಕೆ 5 ಕೋಟಿ ನೆರವು ಘೋಷಿಸಿದ ಸಿಎಂ

ಡಾ.ರಾಜ್ ಕುಮಾರ್ ಅವರ ಕನಸಿನ ಕೂಸು ಶಕ್ತಿಧಾಮ. ಮಹಿಳೆಯರ ಪುನರ್ವಸತಿ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ 5 ಕೋಟಿ ರೂ ನೆರವು ನೀಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ.
ಶಕ್ತಿಧಾಮದಲ್ಲಿ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ಕಟ್ಟಡ ಲೋಕಾರ್ಪಣೆ ಹಾಗೂ ಶಕ್ತಿಧಾಮ ವಿದ್ಯಾಶಾಲಾ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಮಾಜದ ನೋವಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಶೋಷಿತರು, ದುರ್ಬಲರನ್ನು ಸಮಾಜ ಮತ್ತು ಸರಕಾರ ಕೈ ಹಿಡಿದು ನಿಲ್ಲಿಸಬೇಕು. ಪ್ರೀತಿ ವಿಶ್ವಾಸವನ್ನು ಸಮಾಜಕ್ಕೆ ಕೊಟ್ಟರೇ ಅದೇ ಪ್ರೀತಿ ಗೌರವ ನಮಗೆ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಳ್ಳೆಯದನ್ನೇ ಮಾಡಬೇಕು. ಒಳ್ಳೆಯದನ್ನೇ ಯೋಚಿಸಬೇಕು ಎಂದರು.
ಶಕ್ತಿಧಾಮ ಎಂಬುದು ಸರಿಯಾದ ಹೆಸರು. ಸ್ತ್ರೀ ಎಂದರೆ ಶಕ್ತಿ. ಭಗವಂತ ಸೃಷ್ಟಿ ಮಾಡುವ ಅಮೂಲ್ಯ ಗುಣವನ್ನು ಹೆಣ್ಣಿಗೆ ನೀಡಿದ್ದಾನೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಏನೆಲ್ಲಾ ಮಾಡಿದರೂ ಒಂದು ಮಗುವಿಗೆ ಜನ್ಮ ನೀಡುವ ಶಕ್ತಿಯನ್ನು ಪಡೆದುಕೊಂಡಿಲ್ಲ. ಹಾಗಾಗಿ ಇಂದು ಸರಕಾರ ಮಾಡುವ ಕೆಲಸವನ್ನು ಶಕ್ತಿಧಾಮ ಮಾಡುತ್ತಿದೆ. ಹಾಗಾಗಿ ಬಜೆಟ್ನಲ್ಲಿ ಇದಕ್ಕೆ ವಿಶೇಷ ನೆರವು ಘೋಷಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರನ್ನೂ ನೆನಪು ಮಾಡಿಕೊಂಡ ಸಿಎಂ, ಅಪ್ಪು ಸಾವಿರಾರು ಮಂದಿಗೆ ಸಹಾಯ ಮಾಡಿದ್ದರು. ಅವರ ಆದರ್ಶವನ್ನು ನಾವು ಪಾಲನೆ ಮಾಡಬೇಕಿದೆ ಎಂದರು.




