ಪುಷ್ಪಾ ಚಿತ್ರಕ್ಕೆ ಕಾರ್ಟೂನ್ ಮೂಲಕ ಗೌರವ ಸಲ್ಲಿಸಿದ ಅಮುಲ್, ದಿಲ್ ಖುಷ್ ಆದ ಚಿತ್ರತಂಡ

ಇತ್ತೀಚೆಗೆ ತೆರೆಕಂಡ ಟಾಲಿವುಡ್ನ ಪುಷ್ಪ: ದಿ ರೈಸ್ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಅದ್ರಲ್ಲೂ ನಟ ಅಲ್ಲು ಅರ್ಜುನ್ ಅಭಿನಯಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಅಗಿದ್ದು ಪುಷ್ಪ ಸಿನಿಮಾದ ಸೆಕೆಂಡ್ ಪಾರ್ಟ್ ನೋಡೋಕೆ ಕಾದು ಕೂತಿದ್ದಾರೆ. ಎಲ್ಲೆಡೆ ಪುಷ್ಪಾ ಸಿನಿಮಾ ಸದ್ದು ಮಾಡ್ತಿರುವಾಗ ಅಮುಲ್ ಕಂಪೆನಿ ಪುಷ್ಪ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದೆ.
ಸಿನಿಮಾ ತಾರೆಗಳಿಗೆ ಅಭಿಮಾನಿಗಳು ವಿಶೇಷವಾಗಿ ಗೌರವ ಸಲ್ಲಿಸೋಕೆ ಹೊಸ ಹೊಸ ಐಡಿಯಾಗಳನ್ನ ಹುಟ್ಟುಹಾಕ್ತಾರೆ. ಅದರಂತೆ ದೇಶದ ಪ್ರಮುಖ ಗ್ರಾಹಕ ಉತ್ಪನ್ನಗಳ ಬ್ರಾಂಡ್ಗಳಲ್ಲಿ ಒಂದಾಗಿರೋ ಅಮುಲ್ ತನ್ನ ಜಾಹೀರಾತಿನ ಮೂಲಕ ಪುಷ್ಪಾ ಸಿನಿಮಾಗೆ ವಿಭಿನ್ನವಾಗಿ ಗೌರವ ಸಲ್ಲಿಸಿದೆ. ಜಾಹಿರಾತು ನೋಡಿದ ಅಭಿಮಾನಿಗಳು ಫುಲ್ ದಿಲ್ ಖುಷ್ ಆಗಿದ್ದಾರೆ. ಚಿತ್ರದ ಪುಷ್ಪಾ ರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್ ಹಾಗೂ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಮದಣ್ಣ ಅವರ ಕಾರ್ಟೂನ್ ರಚಿಸಿ ಆ ಮೂಲಕ ಗೌವರ ಸಲ್ಲಿಸಲಾಗಿದೆ.
ಪುಷ್ಪಾ ಸಿನಿಮಾದ ಸಾಮಿ ಸಾಮಿ ಹಾಡು ಸಖತ್ ಹಿಟ್ ಆಗಿತ್ತು. ಸಾಕಷ್ಟು ಮಂದಿ ಇದ್ರ ರೀಲ್ ಮಾಡಿ ಖುಷಿ ಪಟ್ಟಿದ್ದರು. ಇದೀಗ ಅದೇ ಹಾಡಿನ ಕಾರ್ಟೂನ್ ರಚಿಸಿ ಜಾಹೀರಾತನ್ನ ಮಾಡಿದೆ ಅಮುಲ್. ಶ್ರೀವಲ್ಲಿ ಕೈಯಲ್ಲಿ ಬೆಣ್ಣ ಹಿಡಿದುಕೊಂಡು ಪುಷ್ಪಾರಾಜ್ನನ್ನ ಬೆಣ್ಣೆ ತಿನ್ನಲು ಕರೆಯುತ್ತಿರುವ ರೀತಿಯಲ್ಲಿ ಕಾರ್ಟೂನ್ ರೆಡಿ ಮಾಡಲಾಗಿದೆ.
ಅಮುಲ್ ಜಾಹಿರಾತಿನಿಂದ ಫುಲ್ ಖುಷ್ ಆಗಿರೋ ಪುಷ್ಪ ಚಿತ್ರತಂಡ ಕಾರ್ಟೂನ್ ಫೋಟೋವನ್ನ ಟ್ವೀಟ್ ಮಾಡಿದೆ. ಕಳೆದ ಡಿಸೆಂಬರ್ 17ರಂದು ರಿಲೀಸ್ ಆದ ಪುಷ್ಪ ಸಿನಿಮಾ 350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು ಒಟಿಟಿಯಲ್ಲೂ ಸೌಂಡ್ ಮಾಡ್ತಿದೆ. ಪುಷ್ಪ ಸಿನಿಮಾದ ಮುಂದುವರೆದ ಭಾಗ ಡಿಸೆಂಬರ್ 2022ರಲ್ಲಿ ತೆರೆಗೆ ಬರಲಿದೆ.



