
ಸಿನಿಮಾ ಎಂದರೇನು? ಈ ಪ್ರಶ್ನೆಗೆ ಹಲವರು ಹಲವಾರು ರೀತಿಯ ಹೇಳಿಕೆಗಳನ್ನು ಕೊಡುತ್ತಾರೆ. ಕೆಲ ಹಿರಿಯ ಚಿತ್ರರಂಗದ ಬುದ್ದಿಜೀವಿಗಳು ಸಿನಿಮಾ ಎಂದರೆ ಅದೊಂದು ಕಣ್ಣ ಮುಂದೆ ಕಾಣುವ ಸುಳ್ಳು ಪ್ರಪಂಚ ಎಂದರೆ ಇನ್ನು ಕೆಲವರು ಸಿನಿಮಾ ಕಣ್ಣೆದುರು ಕಾನುವ ಭ್ರಮೆ ಎನ್ನುತ್ತಾರೆ!
ಹಾಗಾದರೆ ನಿಜವಾಗಲೂ ಸಿನಿಮಾ ಎಂದರೇನು?
‘ಅಕ್ಷರ ಮಾಧ್ಯಮವನ್ನು ಅಥವ ಶ್ರವಣ ಮಾಧ್ಯಮವನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವುದನ್ನು ಸಿನಿಮಾ’ ಎಂದು ಸ್ಥೂಲವಾಗಿ ಹೇಳಬಹುದು.ಅಂದರೆ ದೃಶ್ಯ ಶ್ರವಣ ಮಾಧ್ಯಮವೇ ಸಿನಿಮಾ| ಒಟ್ಟಾರೆಯಾಗಿ ನಮ್ಮ ಕಲ್ಪನೆ ಆಲೋಚನೆಯನ್ನು ಕ್ಯಾಮರಾದಲ್ಲಿ ಚಿತ್ರೀಕರಿಸಿ ಜನರಿಗೆ ತೋರಿಸುವುದನ್ನು ಸಿನಿಮಾ ಎನ್ನಬಹುದು. ಅದು ಒಂದು ಕಲ್ಪಿತ ಕಥೆಯಿರಬಹುದು, ನೈಜ ಘಟನೆಯಿರಬಹುದು, ಸುದ್ದಿಯಿರಬಹುದು, ಮಾತುಕತೆಯಿರಬಹುದು.. ಅದೇನೆ ಇದ್ದರೂ ಅದನ್ನು ನಾವು ದೃಶ್ಯಮಾಧ್ಯಮಕ್ಕೆ ಬದಲಾಯಿಸಿದರೆ ಅದು ಸಿನಿಮಾ ಆಗುತ್ತದೆ, ಧಾರಾವಾಹಿ ಆಗುತ್ತದೆ, ಟಿವಿ ನ್ಯೂಸ್ ಆಗುತ್ತದೆ ಅಥವಾ ಇತ್ತೀಚಿನ ಹೊಸ ಟ್ರೆಂಡ್ ಆದ ರಿಯಾಲಿಟಿ ಷೋ ಆಗುತ್ತದೆ! ಅದೇನೆ ಆಗಿದ್ದರೂ ನಾವು ಅದಕ್ಕೇನೆ ಹೆಸರು ಕೊಟ್ಟರೂ ಅದು ದೃಶ್ಯರೂಪದಲ್ಲಿ ಒಬ್ಬ ನಿರ್ದೇಶಕನಿಂದ ನಿರ್ದೇಶಿಸಲ್ಪಟ್ಟಿರುತ್ತದೆ!
ನಿಮಗೆ ಗೊತ್ತೆ ಪ್ರಪಂಚದ ಮೊಟ್ಟಮೊದಲ ಸಿನಿಮಾ ಹೇಗಿತ್ತೆಂದು? ಆ ಸಿನಿಮಾ ಪ್ರಪ್ರಥಮ ಬಾರಿಗೆ ಜನರಿಗೆ ಪ್ರದರ್ಶಿಸಿದಾಗ ಅಲ್ಲೊಂದು ದೊಡ್ಡ ಅಲ್ಲೋಲ ಕಲ್ಲೋಲವೇ ನಡೆದುಹೋಯಿತಂತೆ! ಏನಪ್ಪ ಅಂಥ ಸಿನಿಮಾ ಅದು, ಮೊದಲ ಸಿನಿಮಾನೇ ಹಾರರ್ ಸಿನಿಮಾನಾ ಎಂದು ಯೋಚಿಸಬೇಡಿ. ಯುರೋಪಿನ ಲುಮಿರಿ ಸಹೋದರರು ತಯಾರಿಸಿದ ಮೊಟ್ಟಮೊದಲ ಸಿನಿಮಾ ‘ದಿ ಅರೈವಲ್ ಆಫ್ ಟ್ರೇನ್’ ಎಂಬ ಕಿರುಚಿತ್ರ ಕೇವಲ ಕೆಲವೇ ನಿಮಿಷಗಳದ್ದು. ಅದರಲ್ಲಿ ಒಂದು ರೈಲು ಬಂದು ನಿಲ್ದಾಣದಲ್ಲಿ ನಿಲ್ಲುತ್ತದೆ, ಅಷ್ಟೆ! ಅದನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಿದಾಗ ಜನರು ಆ ರೈಲು ಎಲ್ಲಿ ತಮ್ಮ ಮೈಮೇಲೆ ಬಂದುಬಿಡುವುದೋ ಎಂದು ಹೆದರಿ ಕೂಗುತ್ತ, ಕಿರುಚುತ್ತ ಅಲ್ಲಿಂದ ಎದ್ದು ಬಿದ್ದು ಓಡಿದರಂತೆ!
ನಂತರ ಸಿನಿಮಾದ ಕಲ್ಪನೆ ಜನರಿಗೆ ನಿಧಾನವಾಗಿ ಬರತೊಡಗಿದಾಗ ಅದು ನಿಧಾನವಾಗಿ ಒಂದು ಉದ್ಯಮವಾಗಿ ಬೆಳೆಯತೊಡಗಿತು. ದೃಶ್ಯಮಾಧಯಮದ ಸವಿಯನ್ನು ಜನರು ಬೆಲ್ಲದಂತೆ ಸವಿಯಲಾರಂಭಿಸಿದರು. ಮೊದಲಿಗೆ ಬರುತ್ತಿದ್ದುದೆಲ್ಲ ಬರಿ ಮೂಕಿ ಹಾಗೂ ಕಪ್ಪುಬಿಳುಪು ಚಿತ್ರಗಳು ಮಾತ್ರ. ಇಂದಿನ ತಾಂತ್ರಿಕತೆ ಅಂದು ಲಭ್ಯವಿಲ್ಲದ್ದರಿಂದ ಅದರಲ್ಲೇ ಜನರನ್ನು ಕನಸಿನ ಲೋಕಕ್ಕೆ ಕರೆದೊಯ್ಯಬಲ್ಲಂಥ, ನಕ್ಕುನಗಿಸಿ ಹೊಟ್ಟೆಹುಣ್ಣುಮಾಡುವಂಥ, ಜನರನ್ನು ಹಿಡಿದು ಕೂರಿಸುವಂಥ ಪ್ರತಿಭೆ ಅಂದಿನ ಸಿನಿಮಾ ನಿರ್ದೇಶಕರಲ್ಲಿತ್ತು. ಈ ಮಾತನ್ನುಇಂದಿನ ನಿರ್ದೇಶಕರನ್ನು ಟೀಕೆ ಮಾಡಲು ಹೇಳುತ್ತಿಲ್ಲ. ಜಗತ್ತಿನ ಎಲ್ಲೆಡೆಯೂ ಅಂದಿನ ನಿರ್ದೇಶಕರು ನಿರ್ದೇಶಿಸಿರುವ ಹಲವಾರು ಚಿತ್ರಗಳು ಇಂದಿಗೂ ಸಹ ಅತ್ಯಂತ ಜನಮನ್ನಣೆಯ ಚಿತ್ರಗಳಾಗಿವೆಯೆಂದರೆ ನನ್ನ ಮಾತಿನ ಸತ್ಯ ನಿಮಗೆ ತಿಳದೀತು.
ಓಂಪ್ರಕಾಶ್ ನಾಯಕ್, BMG24x7ಲೈವ್ಕನ್ನಡ
ಮುಂದುವರೆಯುವುದು..




