ಗಾಂಧಿನಗರದಲ್ಲಿ ಡೋಸ್ ನೀಡೋಕೆ ಬರ್ತಿದೆ ಯುವಕರ ತಂಡ

ಕೋವಿಡ್ ಆರಂಭವಾದ ಬಳಿಕ ಎಲ್ಲಿ ನೋಡಿದರು ಬರಿ ಡೋಸ್ಗಳದ್ದೆ ಮಾತು. ಆರಂಭದಲ್ಲಿ ಕಾಳಸಂತೆಯಲ್ಲಿ ಬಿಕರಿಯಾದ ಡೋಸ್ ಬಳಿಕ ಜನರ ಕೈಗೆ ಸೇರಿದ್ದು ಗೊತ್ತೆ ಇದೆ. ಮೊದಲ ಡೋಸ್ ಬಳಿಕ ಎರಡನೇ ಡೋಸ್. ಇದೀಗ ಮೂರನೇಯ ಬೂಸ್ಟರ್ ಡೋಸ್ ಕೂಡ ಆರಂಭವಾಗಿದೆ. ಅಂದ್ಹಾಗೆ ಈ ಡೋಸ್ ಬಗ್ಗೆ ಹೇಳೋಕೆ ಕಾರಣವಾಗಿರೋದು ಗಾಂಧಿನಗರದಲ್ಲಿ ಸದ್ಯದಲ್ಲೇ ಆರಂಭವಾಗಲಿರೋ ಡೋಸ್ ಹೆಸರಿನ ಸಿನಿಮಾ.
ಗಾಂಧಿನಗರದಲ್ಲಿ ಸದ್ದು ಮಾಡ್ತಿರೋದು ಕೊರೊನಾ ಲಸಿಕೆಯ ಡೋಸ್ ಅಲ್ಲ. ಬದಲಾಗಿ ಡೋಸ್ ಟೈಟಲ್ನ ಸಿನಿಮಾವೊಂದು ಕನ್ನಡದಲ್ಲಿ ತಯಾರಾಗ್ತಿದ್ದು ಇತ್ತೀಚೆಗೆ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ.
ಹೊಸ ಯುವಕರ ತಂಡವೊಂದು ವಿಭಿನ್ನ ಆಲೋಚನೆಯೊಂದಿಗೆ ತಮ್ಮದೇ ಆದ ಹೊಸ ರೀತಿಯಲ್ಲಿ ಕಥೆ ಹೆಣೆದಿದ್ದು ಪ್ರೇಕ್ಷಕರ ಮುಂದೆ ಇಡೋ ತಯಾರಿಯಲ್ಲಿದೆ. ಇತ್ತೀಚೆಗಷ್ಟೇ ಚಿತ್ರದ ಥೀಮ್ ಪೋಸ್ಟರ್ ಅನ್ನು ನಿರ್ದೇಶಕ ಸಿಂಪಲ್ ಸುನಿ ರಿಲೀಸ್ ಮಾಡಿದ್ದು ಹೊಸ ಹುಡುಗರ ಡೋಸ್ಗೆ ಸಾಥ್ ನೀಡಿದ್ದಾರೆ.
ನೀನಾಸಂ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ, ಕನ್ನಡದ ಹಲವು ಚಿತ್ರಗಳಿಗೆ ಸಹ ನಿರ್ದೇಶನ, ಸಂಭಾಷಣೆ ಹಾಗೂ ಗೀತ ರಚನೆಕಾರರಾಗಿ ಕೆಲಸ ಮಾಡಿದ್ದ ಧನಂಜಯ್ ದಿಡಗ ಡೋಸ್ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ವಿಭಿನ್ನ ರೀತಿಯ ಕಥೆಯ ಎಳೆಯನ್ನ, ಹೊಸ ರೀತಿಯ ನಿರೂಪಣೆಯ ಮೂಲಕ ನೋಡುಗರಿಗೆ ಅತ್ಯಂತ ಗಾಢವಾದ ಭಾವ ಪ್ರಪಂಚವನ್ನ ಕಟ್ಟಿಕೊಡೋಕೆ ಚಿತ್ರತಂಡ ಮುಂದಾಗಿದೆ. ಸೂಪರ್ ನ್ಯಾಚುರಲ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನಲ್ಲಿರುವ ಡೋಸ್ ಚಿತ್ರದ ಪ್ರಮುಖ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಸಂತೋಷ್ ಕುಮಾರ್, ಅರ್ಜುನ್ ಕಿಶೋರ್ ಚಂದ್ರ ಸೇರಿದಂತೆ ಸಾಕಷ್ಟು ಮಂದಿ ಬಣ್ಣ ಹಚ್ಚಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಆರಂಭಿಸೋಕೆ ಚಿತ್ರತಂಡ ರೆಡಿಯಾಗಿದೆ.




