ರಾಜಕೀಯ ಎಂಟ್ರಿ ಸುಳಿವು ನೀಡಿದ ದಳಪತಿ ವಿಜಯ್

ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಸದ್ಯದಲ್ಲೇ ತೆರೆಗೆ ಬರೋಕೆ ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ 10 ವರ್ಷಗಳ ಬಳಿಕ ವಿಜಯ್ ಮಾದ್ಯಮಗಳ ಮುಂದೆ ಸಂದರ್ಶನ ನೀಡಿದ್ದಾರೆ. ಜೊತೆಗೆ ತಮ್ಮ ರಾಜಕೀಯ ಎಂಟ್ರಿಯ ಕುರಿತಾಗಿ ಮಾತನಾಡಿದ್ದಾರೆ.
ಬೀಸ್ಟ್ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಸಿನಿಮಾದ ಜೊತೆಗೆ ರಾಜಕೀಯ ಎಂಟ್ರಿಯ ಕುರಿತಾಗಿಯೂ ಮಾತನಾಡಿದ್ದಾರೆ. ಈವರೆಗೂ ಯಾವ ರಾಜಕೀಯ ಪಕ್ಷಕ್ಕೂ ಬೆಂಬಲ ನೀಡದಿದ್ದರೂ ತಮಿಳುನಾಡು ರಾಜ್ಯ ರಾಜಕೀಯದ ಮೇಲೆ ವಿಜಯ್ ಪ್ರಭಾವ ಬೀರುತ್ತಿದ್ದಾರೆ. ಈ ಹಿಂದೆ ವಿಜಯ್ ತಂದೆ ಮಗನ ಹೆಸರಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಆದರೆ ತಾವು ಆ ಪಕ್ಷದೊಟ್ಟಿಗೆ ಸಂಬಂಧ ಇಟ್ಟುಕೊಂಡಿಲ್ಲ ಎಂದು ವಿಜಯ್ ಬಹಿರಂಗವಾಗಿ ಹೇಳಿಕೆ ಬಿಡುಗಡೆ ಮಾಡಿದರು.
ಸಂದರ್ಶನದಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿರುವ ವಿಜಯ್, ”ಅಭಿಮಾನಿಗಳು ಬಯಸಿದಲ್ಲಿ ರಾಜಕೀಯಕ್ಕೆ ಪ್ರವೇಶಿಸುತ್ತೇನೆ” ಎಂದಿದ್ದಾರೆ. ಜೊತೆಗೆ ಕಳೆದ ವರ್ಷದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿಜಯ್, ಸೈಕಲ್ ನಲ್ಲಿ ಬಂದು ಮತ ಚಲಾಯಿಸಿದ್ದರು, ಪೆಟ್ರೋಲ್ ದರ ಏರಿಕೆ ವಿರುದ್ಧ ವಿಜಯ್ ಮಾಡಿದ ಪ್ರತಿಭಟನೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆಯೂ ಉತ್ತರಿಸಿದ ವಿಜಯ್, ”ಮತಗಟ್ಟೆ ನನ್ನ ಮನೆಯ ಹಿಂದಿನ ರಸ್ತೆಯಲ್ಲಿಯೇ ಇತ್ತು ಹಾಗಾಗಿ ಸೈಕಲ್ ನಲ್ಲಿ ಹೋದೆ, ಬೇರೆ ಉದ್ದೇಶ ಇರಲಿಲ್ಲ” ಎಂದಿದ್ದಾರೆ.




