ಹುಬ್ಬಳ್ಳಿಯ ಕಿಲಾಡಿ ಕಳ್ಳನನ್ನು ಹಿಡಿದ ಧಾರವಾಡ ನಗರ ಠಾಣೆಯ ಪೊಲೀಸರು

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರ ಸೇರಿದಂತೆ ಅಂತರ ಜಿಲ್ಲಾ ಕಿಲಾಡಿ ಕಳ್ಳನನ್ನು ಬಂಧಿಸುವಲ್ಲಿ, ಧಾರವಾಡ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಕಿಲಾಡಿ ಕಳ್ಳ ಹಳೇ ಹುಬ್ಬಳ್ಳಿಯ ಆನಂದನಗರದ, ಆರೂಢ ಕಾಲನಿಯ ಮುಜಮ್ಮಿಲ್ ರಿಯಾಜ್ ಖಾಜಿ ಎಂದು ಗುರುತಿಸಲಾಗಿದೆ.
ಕಳೆದ ಜೂನ್ 25 ರಂದು ಧಾರವಾಡದ ಕಾಮನಕಟ್ಟಿ ನಿವಾಸಿ ಸಿದ್ಧಲಿಂಗೇಶ್ವರವರು ತಮ್ಮ ಟಿವಿಎಸ್ ಎನ್ಕಾರ್ಟ್ ಬೈಕ್ ಕಳ್ಳತನ ಕುರಿತು ಧಾರವಾಡ ನಗರ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣದ ಬೆನ್ನು ಬಿದ್ದ ಧಾರವಾಡ ಪೊಲೀಸ್ ಠಾಣೆಯ ಪೊಲೀಸರು, ಕಿಲಾಡಿ ಕಳ್ಳನನ್ನು ಧಾರವಾಡ ನಗರದ ವನಿತಾ ಸೇವಾ ಸಮಾಜದ ರಸ್ತೆಯ ಹತ್ತಿರ ಬಲೆಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೂಡಲೇ ವಶಕ್ಕೆ ಪಡೆದ ಪೊಲೀಸರು ಚಾಲಾಕಿ ಕಳ್ಳನನ್ನು ವಿಚಾರಣೆಗೆ ಒಳಪಡಿಸಿದಾಗ, ಕಿಲಾಡಿ ಕಳ್ಳನ ಕೈಚಳಕ ಬೆಳಕಿಗೆ ಬಂದಿದ್ದು, ಬಂಧಿತನಿಂದ 7 ವಿವಿಧ ಕಂಪನಿಯ ಬೈಕ್, 1 ಕಾರ್ ಹಾಗೂ 7 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು ಇವುಗಳ ಅಂದಾಜು ಮೊತ್ತ 4 ಲಕ್ಷ 20 ಸಾವಿರ ಎಂದು ಹೇಳಲಾಗುತ್ತಿದೆ.
ಇನ್ನೂ ಧಾರವಾಡ ಉಪನಗರ ಪೊಲೀಸ್ ಠಾಣೆಯ 1 ಪ್ರಕರಣ, ಬೆಳಗಾವಿ ಜಿಲ್ಲೆಯ ಕಿತ್ತೂರ, ಬೆಳಗಾವಿ ಮಾರ್ಕೆಟ್ ಪೊಲೀಸ ಠಾಣೆ ಹಾಗೂ ಸವದತ್ತಿ ಪೊಲೀಸ್ ಠಾಣೆಯ ತಲಾ ಒಂದೊಂದು ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಇನ್ನೂ ಮೂಲತಃ ಪೇಂಟರ್ ಆಗಿರುವ ಮುಜಮ್ಮಿಲ್, ಹೋದ ಕಡೆಗಳಲ್ಲಿ ವಾಹನಗಳನ್ನ ಕದ್ದು ಪರಾರಿಯಾಗುತ್ತಿದ್ದನೆಂದು ಹೇಳಲಾಗಿದೆ.




