ಮುರ್ಡೇಶ್ವರದ ಯಮುನಾ ನಾಯ್ಕ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ವೆಂಕಟೇಶ್ ಹರಿಕಾಂತ ನಿರ್ದೋಷಿ

ಕಾರವಾರ : ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಅಕ್ಟೋಬರ್ 23, 2010 ರಂದು ನಡೆದಿದ್ದ ಹಿರೆದೋಮಿಯ 21 ವರ್ಷ ಹರೆಯದ ಯುವತಿ ಯಮುನಾ ನಾಯ್ಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯ 11 ವರ್ಷದ ಬಳಿಕ ಮರು ತನಿಖೆಗೆ ಆದೇಶ ನೀಡಿದೆ.
ತಾಲೂಕಿನ ಮುರ್ಡೇಶ್ವರದ ಹಿರೆದೋಮಿಯ 21 ವರ್ಷದ ಯಮುನಾ ನಾಯ್ಕ ಎಂಬ ಯುವತಿ ಹೊಟ್ಟೆಪಾಡಿಗಾಗಿ ಬೇರೊಬ್ಬರ ಮನೆಯಲ್ಲಿ ಮನೆ ಕೆಲಸವನ್ನು ಮಾಡಿಕೊಂಡಿದ್ದಳು. ಹೀಗಿರುವಾಗ ಅಕ್ಟೋಬರ್ 23, 2010 ರಂದು ಯಮುನಾ ನಾಯ್ಕ ಎಂದಿನಂತೆ ಕೆಲಸಕ್ಕಾಗಿ ಮನೆಯಿಂದ ಹೊರಟವಳು ಸಂಜೆಯಾದರೂ ಮನೆಗೆ ವಾಪಸ್ಸಾಗಿರಲಿಲ್ಲ. ಮನೆಯವರು ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿರಲಿಲ್ಲ. ಮಾರನೆಯ ದಿನ ರವಿವಾರ ಆಕೆಯ ಮೃತ ದೇಹ ಮಹಮ್ಮದ್ ಸಾದಿಕ್ ಎಂಬ ಹೆಸರಿನ ವ್ಯಕ್ತಿಯ ಮನೆಯ ಕಟ್ಟಿಗೆಯ ಸಂಗ್ರಹ ಸ್ಥಳದಲ್ಲಿ ಪತ್ತೆಯಾಗಿತ್ತು.
ಆಕೆಯ ಮೇಲೆ ಅತ್ಯಾಚಾರ ನಡೆದು ಕೊಲೆಯಾಗಿರುವುದು ದೃಡವಾಗುತ್ತಿದ್ದಂತೆ ಮುರ್ಡೇಶ್ವರ ಹೊತ್ತಿ ಉರಿದಿತ್ತು.ವಿವಿಧ ಸಂಘಟನೆಯ ಮದ್ಯ ಪ್ರವೇಶದೊಂದಿಗೆ ಪ್ರಕರಣ ಕೋಮು ಸಂಘರ್ಷದತ್ತ ವಾಲಿತ್ತು. ಪೊಲೀಸರು ಮೂರು ತಂಡವನ್ನು ಮಾಡಿ ಆರೋಪಿಗಳ ಪತ್ತೆ ಕಾರ್ಯ ನಡೆಸಿದ್ದರು. ಕೊನೆಗೆ ಈ ಪೊಲೀಸರು ವೆಂಕಟೇಶ ಹರಿಕಾಂತ ಎಂಬಾತನನ್ನು ಪ್ರಕರಣದಲ್ಲಿ ಪಿಟ್ ಮಾಡಿ, ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಅತ್ಯಂತ ಪಾರದರ್ಶಕತೆ ಮತ್ತು ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ಆ ಸಂದರ್ಭದಲ್ಲಿ ತಮಗೆ ತಾವೇ ಬೆನ್ನು ತಟ್ಟಿಕೊಂಡಿದ್ದರು. ಒಟ್ಟು 51 ಸಾಕ್ಷಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಒದಗಿಸಿದ್ದರು.

ಆದರೆ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆದು ನ್ಯಾಯಾಲಯ ಆರೋಪಿಯನ್ನು ಬಂಧನ ಮುಕ್ತಗೊಳಿಸಿತ್ತು. ಇದರ ವಿರುದ್ದ ಇದೆ ಪೊಲೀಸರು ಹೈಕೋರ್ಟ್ ಮೆಟ್ಟಿಲನ್ನು ಏರಿದ್ದರು. ಇದೀಗ ಹೈಕೋರ್ಟ್ ವೆಂಕಟೇಶ ಹರಿಕಾಂತ ಎಂಬಾತನನ್ನು ಆರೋಪದಿಂದ ಖುಲಾಸೆ ಗೊಳಿಸಿದೆ.
ಯುವತಿಯ ತಂದೆ ನಾಗಪ್ಪ ನಾಯ್ಕ ನೀಡಿದ ದೂರಿನಲ್ಲಿ ಹೆಸರಿದ್ದ ಮತ್ತು ಕೊಲೆ ಘಟನೆ ನಡೆದ ಮನೆಯ ಮಾಲೀಕ ಮಹಮ್ಮದ್ ಸಾದಿಕ್ ದೊಣ್ಣ ಖಾಸಿಪ್, ಮಹಮ್ಮದ್ ನಿಸಾರ್, ಮುರ್ಡೇಶ್ವರ, ನ್ಯಾಷನಲ್ ಕಾಲೋನಿಯ ಯಾಸಿನ್ ಶೇಖ್, ನೀಲಗಿರಿ ಸಿದ್ದಿ ಮಹಮ್ಮದ್, ಹಬೀಬ್ ಶೇಖ, ಅಂಡಾ ನಾಸಿರ್ ಇವರುಗಳ ವೀರ್ಯ, ಉಗುರು, ಕೂದಲು ಇತ್ಯಾದಿಗಳನ್ನು ಸಂಗ್ರಹಿಸಿ ಹೈದ್ರಾಬಾದ್ ಕೇಂದ್ರಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ, ಈ ಮೊದಲು ಕೊಲೆಗೀಡಾದ ಯುವತಿಯ ದೇಹದಲ್ಲಿ ಪತ್ತೆಯಾದ ಕೂದಲು ಇತ್ಯಾದಿಗಳೊಂದಿಗೆ ತಾಳೆ ಹಾಕಿ ಆರೋಪಿಯನ್ನು ಪತ್ತೆ ಹಚ್ಚುವಂತೆ ಆದೇಶ ನೀಡಿದೆ. ಅಲ್ಲದೆ ಇದೆ ಆರೋಪ ಪಟ್ಟಿಯಲ್ಲಿದ್ದ ಮಹಿಳೆಯರಾದ ಸಲ್ಮಾ ಹಾಗೂ ಪರ್ವಿನ್ ಹೆಸರನ್ನು ನ್ಯಾಯಾಲಯ ತನಿಖೆಯಿಂದ ಕೈ ಬಿಟ್ಟಿದೆ.
ಈ ಪ್ರಕರಣದ ಜೊತೆಗೆ ಭಟ್ಕಳ ತಾಲೂಕಿನಲ್ಲಿ ನಡೆದ ಹೆಚ್ಚಿನ ಎಲ್ಲ ಪ್ರಮುಖ ಕೊಲೆ ಪ್ರಕರಣಗಳಲ್ಲಿ, ನ್ಯಾಯಾಲಯದಲ್ಲಿ ತಾವು ಮಾಡಿದ ಆರೋಪಗಳನ್ನು ಸಾಬೀತು ಪಡಿಸಲು ಪೊಲೀಸರು ವಿಫಲರಾಗುತ್ತಲೇ ಇದ್ದು,ಇದು ತಾಲೂಕಿನಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಪ್ರಕರಣ ಈಗ ಜಿಲ್ಲೆಯಲ್ಲಿ ಸಂಚಲನವನ್ನು ಹುಟ್ಟುಹಾಕಿದ್ದು,ಈ ಪ್ರಕರಣದ ನಿಜವಾದ ಅತ್ಯಾಚಾರಿಗಳು ಹಾಗೂ ಕೊಲೆಗಾರರ ಎದೆಯಲ್ಲಿ ನಡುಕ ಹುಟ್ಟಿರುವುದಂತೂ ಸುಳ್ಳಲ್ಲ. ಆರೋಪಿ ವೆಂಕಟೇಶ್ ಹರಿಕಾಂತನ ಪರ ಖ್ಯಾತ ವಕೀಲ ಕುಂದಾಪುರದ ರವಿಕಿರಣ ಮುರ್ಡೇಶ್ವರ ವಾದ ಮಂಡಿಸಿದ್ದರು. ನ್ಯಾಯಾಲಯದ ಈ ಆದೇಶ ಭಟ್ಕಳ ತಾಲೂಕಿನಲ್ಲಿ ಮತ್ತೊಮ್ಮೆ ಸಂಚಲನವನ್ನು ಉಂಟು ಮಾಡಿದೆ




