ಮುಸ್ಲಿಂ ಅಂಗಡಿಗಳ ಧ್ವಂಸ, 4 ಆರೋಪಿಗಳ ಬಂಧನ; ನಿತೇಶ್ ಪಾಟೀಲ್

ಧಾರವಾಡ: ನುಗ್ಗಿಕೇರಿ ಶ್ರೀ ಅಂಜನೇಯ ದೇವಸ್ಥಾನ ಬಳಿಯ ಮುಸ್ಲಿಂ ಅಂಗಡಿಗಳ ಮೇಲೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಾಲ್ಕು ಜನ ಆರೋಪಿತರನ್ನು ಪೊಲೀಸ್ ಇಲಾಖೆ ಬಂಧಿಸಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿಯೇ ನುಗ್ಗಿಕೇರಿ ದೇವಸ್ಥಾನ ಪ್ರಸಿದ್ಧವಾದ ದೇವಸ್ಥಾನವಾಗಿದೆ. ಈ ದೇವಸ್ಥಾನವು ಖಾಸಗಿ ಆಡಳಿತಕ್ಕೆ ಒಳಪಟ್ಟಿರುತ್ತದೆ. ಅಲ್ಲಿಯ ಕೆಲಸ ಕಾರ್ಯಗಳು ಮತ್ತು ನಿರ್ಧಾರಗಳನ್ನು ಆ ದೇವಸ್ಥಾನದ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ. ಕಳೆದ ಭಾನುವಾರದಂದು ಹಿಂದೂ ಬೆಂಬಲಿತ ಕಾರ್ಯಕರ್ತರು ಏಕಾಏಕಿ ಮುಸ್ಲಿಂ ಅಂಗಡಿಗಳ ಮೇಲೆ ದಾಳಿ ನಡೆಸಿ, ಅಲ್ಲಿ ಹಣ್ಣುಗಳನ್ನು ರಸ್ತೆಗೆ ಏಸೆದಿದ್ದಾರೆ. ಇದರ ಕುರಿತು ದೂರು ಪಡೆದುಕೊಂಡ ನಮ್ಮ ಪೊಲೀಸ್ ಇಲಾಖೆ ಕ್ರಮ ಜರುಗಿಸಿದೆ ಎಂದ ಅವರು, ನುಗ್ಗಿಕೇರಿಯಲ್ಲಿ ಸಂಭವಿಸಿದ ಘಟನೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನುಗ್ಗಿಕೇರಿ ಶ್ರೀ ಅಂಜನೇಯ ದೇವಸ್ಥಾನವು ಈ ಹಿಂದಿನಿಂದಲೂ ಶಾಂತಿ ವಾತಾವರಣವನ್ನು ಕಾಪಾಡಿಕೊಂಡು ಬಂದಿತ್ತು. ಅಲ್ಲಿ ಈ ಹಿಂದೆ ಇಂತಹ ಯಾವುದೇ ಘಟನೆಗಳು ನಡೆದಿಲ್ಲ. ಆದರೆ ಕಳೆದ ಭಾನುವಾರ ಯಾವುದೇ ಮುನ್ಸೂಚನೆ ಇಲ್ಲದೆ ಹಿಂದೂ ಬೆಂಬಲಿರು ಬಂದು ಮುಸ್ಲಿಂ ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ. ಹಿಂದೂ ದೇವಸ್ಥಾನ ಬಳಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಈ ಹಿಂದೆ ಶ್ರೀ ರಾಮ ಸೇನೆಯ ಕಾರ್ಯಕರ್ತರು ದೇವಸ್ಥಾನ ಆಡಳಿತ ಕಮಿಟಿಗೆ ಮನವಿ ನೀಡಿದ್ದರು. ಆದರೆ ಈ ರೀತಿ ಮಾಡುತ್ತಾರೆ ಎಂಬ ಮಾಹಿತಿ ಯಾರಿಗೂ ಇರಲಿಲ್ಲ. ಆದರೆ ಈಗ ಇತಂಹ ಘಟನೆಗಳು ಮರುಕಳಿಸದಂತೆ ಅಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸದ್ಯ ನುಗ್ಗಿಕೇರಿ ಶ್ರೀ ಅಂಜನೇಯ ದೇವಸ್ಥಾನವು ಅಲ್ಲಿಯ ಟ್ರಸ್ಟ್ ಕಮಿಟಿಯ ವ್ಯಾಪ್ತಿಗೆ ಒಳ್ಳಪಟ್ಟಿದೆ. ಇಲ್ಲಿ ಜಿಲ್ಲಾಡಳಿತ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ದೇವಸ್ಥಾನ ಖಾಸಗಿ ಆಡಳಿತಕ್ಕೆ ಒಳಪಟ್ಟಿರುವುದರಿಂದ, ಅಲ್ಲಿ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಾರೆ. ಹಾಗಾಗಿ ಈಗ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡುತ್ತಾರೋ ಅಥವಾ ಇಲ್ವೋ ಅನ್ನುವುದು ಅವರಿಗೆ ಬಿಟ್ಟ ವಿಚಾರಗಿದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಪೋರ್ಟ್ ಆಗಿರುತ್ತದೆ ಎಂದು ತಿಳಿಸಿದ್ದಾರೆ.




