ಮೋದಿ ಬಳಿ ಬೇಕಾದ್ರೂ ಹೋಗ್ತಿನಿ ಲಸಿಕೆ ಮಾತ್ರ ಪಡೆಯಲ್ಲ: ಆರೋಗ್ಯ ಸಿಬ್ಬಂದಿ ಜೊತೆ ಮಹಿಳೆ ವಾಗ್ವಾದ

ಕಲಬುರ್ಗಿ : ಪ್ರಧಾನಿ ಮೋದಿ ಬಳಿ ಹೋಗುವಷ್ಟು ನಮಗೆ ಪವರ್ ಇದೆ. ಮೋದಿ ಬಳಿ ಬೇಕಾದ್ರೆ ಹೋಗುತ್ತೇನೆ. ಆದರೆ, ಕೊರೊನಾ ಲಸಿಕೆ ಹಾಕಿಸಿಕೊಳ್ಳಲ್ಲ ಅಂತ ಲಸಿಕೆ ನೀಡಲು ಬಂದಿದ್ದ ಆರೋಗ್ಯ ಸಿಬ್ಬಂದಿ ಜೊತೆ ಮಹಿಳೆ ವಾಗ್ವಾದ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ರಂಜಣಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊರೊನಾದಿಂದ ಸಾಕಷ್ಟು ಸಾವು ನೋವು ವರದಿಯಾಗಿ ಆತಂಕ ಇದ್ದು, ಇದರ ಮದ್ಯೆಯೂ ಜನ ಕೊರೊನಾ ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜಾಗೃತಿ ಕೊರತೆಯಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ.
ರಂಜಣಗಿ ಗ್ರಾಮದಲ್ಲಿ ಮನೆಗೆ ಹೋದಾಗ ಆರೋಗ್ಯ ಸಿಬ್ಬಂದಿಯೊಂದಿಗೆ ಮಹಿಳೆ ವಾಗ್ವಾದ ಮಾಡಿದ್ದಾಳೆ. ನಮ್ಮ ಮನೆಯಲ್ಲೂ ಡಾಕ್ಟರ್ ಇದ್ದಾರೆ. ನಾವು ರಾಜಕೀಯದವರೆ, ನಮ್ಮ ಮನೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಎಲ್ಲರೂ ಇದ್ದಾರೆ. ನಮಗೆ ನಮ್ಮದೆ ಸಾಕಷ್ಟು ಟೇನ್ಷನ್ ಇದೆ ಹೋಗ್ರಪ್ಪಾ ಇಂಜೆಕ್ಷನ್ ಹಾಕಿಸಿಕೊಳ್ಳಲ್ಲ ಅಂತಾ ವಾಗ್ವಾದ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಜಾಗೃತಿ ಕೊರತೆಯಿಂದ ಇಂತಹ ಘಟನೆ ಕಾಣಸಿಗುತ್ತಿವೆ. ಲಸಿಕೆ ಪಡೆದರೆ ತೊಂದರೆ ಆಗುತ್ತೆ ಎಂಬ ಅಪನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕಿದೆ.




