ವನ್ಯಪ್ರಾಣಿಗಳ ದಾಳಿಯಿಂದ ಹಾನಿ: ಸಂತ್ರಸ್ತರಿಗೆ ಮೂರು ವರ್ಷಗಳಲ್ಲಿ 8.49 ಕೋಟಿ ರೂ. ಪರಿಹಾರ

ಕೊಡಗು: ಕೊಡಗು ಪ್ರವಾಸಿಗಳ ಪಾಲಿನ ಸ್ವರ್ಗ. ಕಳೆದ ಮೂರು ವರ್ಷಗಳಲ್ಲಿ ಕೊಡಗು ಅರಣ್ಯ ವೃತ್ತದಲ್ಲಿ ವನ್ಯಪ್ರಾಣಿಗಳ ದಾಳಿಯಿಂದ ಉಂಟಾದ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ 8.49 ಕೋಟಿ ರೂ ಹಣ ಪಾವತಿಸಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಈ ಮಾಹಿತಿ ನೀಡಿದ್ದಾರೆ.
2018-19ನೇ ಸಾಲಿನಲ್ಲಿ ನಾಗರಹೊಳೆ, ಮಡಿಕೇರಿ, ವೀರಾಜಪೇಟೆ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗಗಳಲ್ಲಿ 3282 ಕೃಷಿ ನಷ್ಟ ಪ್ರಕರಣಗಳು ವರದಿಯಾಗಿದ್ದು, 192.74 ಲಕ್ಷ ರೂ. ಪರಿಹಾರ ನೀಡಲಾಗಿದೆ. 10 ಮಾನವ ಗಾಯ ಪ್ರಕರಣಗಳಿಗೆ 2.204 ಲಕ್ಷ ರೂ. 56 ಸಾಕು ಪ್ರಾಣಿ ನಷ್ಟ ಪ್ರಕರಣಗಳಿಗೆ 5.04 ಲಕ್ಷ 22 ಆಸ್ತಿ ನಷ್ಟ ಪ್ರಕರಣಗಳಲ್ಲಿ 2.47 ಲಕ್ಷ ರೂ. ಸೇರಿದಂತೆ ಒಟ್ಟು 3370 ಪ್ರಕರಣಗಳಲ್ಲಿ ಒಟ್ಟು 202.454 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
2019-20ನೇ ಸಾಲಿನಲ್ಲಿ ಕ್ರಮವಾಗಿ 3478 ಕೃಷಿ ನಷ್ಟ ಪ್ರಕರಣಗಳಲ್ಲಿ 196.79 ಲಕ್ಷ, 3 ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ 10 ಲಕ್ಷ, 18ಮಾನವ ಗಾಯ ಪ್ರಕರಣಗಳಲ್ಲಿ 5.371 ಲಕ್ಷ 164 ಸಾಕುಪ್ರಾಣಿ ನಷ್ಟ ಪ್ರಕರಣಗಳಲ್ಲಿ 13.11ಲಕ್ಷ ಹಾಗೂ 78 ಆಸ್ತಿ ನಷ್ಟ ಪ್ರಕರಣಗಳಲ್ಲಿ 6.152 ಲಕ್ಷ ರೂ. ಸೇರಿದಂತೆ ಒಟ್ಟು 3741 ಪ್ರಕರಣಗಳಲ್ಲಿ 289.48 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ ಎಂದು ಉಮೇಶ್ ಕತ್ತಿ ವಿವರಿಸಿದ್ದಾರೆ.
2020-21ನೇ ಸಾಲಿನಲ್ಲಿ 4969 ಕೃಷಿ ನಷ್ಟ ಪ್ರಕರಣಗಳಿಗೆ 313.82 ಲಕ್ಷ , 2 ಮಾನವ ಪ್ರಾಣ ಹಾನಿ ಪ್ರಕರಣಗಳಿಗೆ 10 ಲಕ್ಷ, 11 ಮಾನವ ಗಾಯ ಪ್ರಕರಣಗಳಿಗೆ 9.2 ಲಕ್ಷ, 55 ಸಾಕು ಪ್ರಾಣಿ ನಷ್ಟ ಪ್ರಕರಣಗಳಿಗೆ 41.34 ಲಕ್ಷ 82 ಆಸ್ತಿ ನಷ್ಟ ಪ್ರಕರಣಗಳಿಗೆ 36.3 ಲಕ್ಷ ರೂ. ಸೇರಿದಂತೆ ಒಟ್ಟು 5127 ಪ್ರಕರಣಗಳಿಗೆ 356.849 ಲಕ್ಷ ರೂ.ಗಳ ದಯಾತ್ಮಕ ಧನ ಪಾವತಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಕಾಡುಹಂದಿ ಕೊಲ್ಲಲು ಆದೇಶ: ಕೊಡಗು ಜಿಲ್ಲೆಯಲ್ಲಿ ಗದ್ದೆಗಳಿಗೆ ಲಗ್ಗೆಯಿಡುತ್ತಿರುವ ಕಾಡುಹಂದಿಗಳ ಉಪಟಳದಿಂದ ಕೃಷಿಕರಿಗೆ ನಷ್ಟವಾಗುತ್ತಿದ್ದು, ಇದರ ಬಗ್ಗೆ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಅರಣ್ಯ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡು ಹಂದಿಗಳಿಂದ ಕೃಷಿ ನಷ್ಟವಾದ ಬಗ್ಗೆ ಪರಿಹಾರ ಕೋರಿ ಕೃಷಿಕರಿಂದ ಯಾವುದೇ ಅರ್ಜಿ ಬಂದಿಲ್ಲ. ಅಲ್ಲದೆ ಕಾಡುಹಂದಿಗಳ ಉಪಟಳ ಅತಿಯಾದಲ್ಲಿ ಹಂದಿಗಳನ್ನು ಕೊಲ್ಲಲು ಆದೇಶ ನೀಡುವ ಅಧಿಕಾರವನ್ನು ಸಂಬಂಧಿಸಿದ ವೃತ್ತ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ನೀಡಲಾಗಿದೆ ಎಂದು ನುಡಿದರು.




