ಶಾಸಕ ಅರವಿಂದ ಬೆಲ್ಲದ್ಗೆ ಸಚಿವ ಸ್ಥಾನ ನೀಡಿ: ಸಿಎಂಗೆ ಪತ್ರ ಬರೆದ ಸಾಹಿತಿ ಕಣವಿ

ಧಾರವಾಡ: ಅತ್ತ ಕಡೆಗೆ ಶಾಸಕ ಅರವಿಂದ ಬೆಲ್ಲದ್ ಈ ಬಾರಿ ಸಚಿವ ಸ್ಥಾನ ಪಡೆಯಲೇಬೇಕು ಎಂಬ ಹಠಕ್ಕೆ ಬಿದಿದ್ದು, ಅದಕ್ಕೆ ಬೇಕಾದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಅವರ ಅಭಿಮಾನಿಗಳು ಈಗ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾ ತಮ್ಮ ನೆಚ್ಚಿನ ನಾಯಕನಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಮತ್ತೊಂದು ಕಡೆಗೆ ಈಗ ಶಾಸಕ ಬೆಲ್ಲದ ಪರ ಹಿರಿಯ ಸಾಹಿತಿಯೊಬ್ಬರು ಸಚಿವ ಸ್ಥಾನ ನೀಡಲು ಒತ್ತಾಯಿಸಿದ್ದಾರೆ.
ಹಿರಿಯ ಸಾಹಿತಿ ಡಾ. ಚೆನ್ನವಿರ ಕಣವಿಯವರು ಈಗ ಶಾಸಕ ಅರವಿಂದ ಬೆಲ್ಲದ್ ಬೆನ್ನಿಗೆ ನಿಂತಿದ್ದು, ಈ ಬಾರಿ ನೂತನ ಮುಖ್ಯಮಂತ್ರಿಗಳ ಸಂಪುಟದಲ್ಲಿ ಶಾಸಕ ಅರವಿಂದ ಬೆಲ್ಲದ್ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಪತ್ರದ ಜೊತೆಗೆ ಹೇಳಿಕೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕಣವಿಯವರ ಹೇಳಿಕೆಯ ವಿಡಿಯೋ ಕೂಡಾ ವೈರಲ್ ಆಗಿದ್ದು, ಈ ಕುರಿತು ನೂತನ ಸಿಎಂ ಬಸವರಾಜ ಬೊಮ್ಮಾಯಿ ವರಿಗೆ ಪತ್ರವನ್ನು ಕೂಡಾ ಬರೆದು ಸಚಿವ ಸ್ಥಾನ ನೀಡುವಂತೆ ಹೇಳಿಕೊಂಡಿದ್ದಾರೆ.
ಈಗಾಗಲೇ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಮತದಾರರು ಅವರನ್ನು ಸತತವಾಗಿ ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಬೆಲ್ಲದ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗಾಗಿ ಈ ಬಾರಿ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಸಚಿವ ಸಂಪುಟದಲ್ಲಿ ಬೆಲ್ಲದ್ ಅವರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಅವರ ಸ್ವಚ್ಚ ರಾಜಕೀಯ ಹಿನ್ನೆಲೆ ಹೊಂದಿರುವ ಅರವಿಂದ್ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ, ನೀಡಿದ ಇಲಾಖೆಯಲ್ಲೂ ಕೂಡಾ ಅವರು ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಭರವಸೆ ಮೂಡಿಸಿದ್ದಾರೆ. ಶಾಸಕ ಅರವಿಂದ ಬೆಲ್ಲದ್ ಗೆ ಈ ಬಾರಿ ಸಚಿವ ಸ್ಥಾನ ನೀಡುವುದು ಒಳ್ಳೆಯದು ಎಂದಿದ್ದಾರೆ.
