ಬಿಟ್ ಕಾಯಿನ್ ಪ್ರಕರಣ ಸಿಬಿಐಗೆ ವಹಿಸುವಂತೆ ವಾಟಾಳ್ ನಾಗರಾಜ್ ಒತ್ತಾಯ

ಮೈಸೂರು: ಬಿಟ್ ಕಾಯಿನ್ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಹಾರ್ಡಿಂಜ್ ವೃತ್ತದಲ್ಲಿ ತಳ್ಳುವ ಗಾಡಿಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕಡಲೆಕಾಯಿ ಕೊಡುವ ಮೂಲಕ ವಾಟಾಳ್ ನಾಗರಾಜ್ ರವರು ವಿನೂತನವಾಗಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಯ್ಯೋ, ನನಗೆ ಬಿಟ್ ಕಾಯಿನ್ (Bitcoin) ಅಂದ್ರೆನೇ ಗೊತ್ತಿಲ್ಲ, ಅದೇನಿದ್ರೂ ದರೋಡೆಕೋರರಿಗೆ ಮಾತ್ರ ಗೊತ್ತು ಎಂದರು. ರಾಜ್ಯದಲ್ಲಿ ನಡೆಯುತ್ತಿರುವ ಬಿಟ್ ಕಾಯಿನ್ ಪ್ರಕರಣವನ್ನ ಸಿಬಿಐಗೆ (CBI) ವಹಿಸಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು.ಯಾರೇ ಶಾಮೀಲಾಗಿದ್ರೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಚುನಾವಣೆ ಟಿಕೆಟ್ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ನವರು ನನಗೆ ಒಂದು ಸ್ಥಾನ ಬಿಟ್ಟುಕೊಡಬೇಕು. ಹಿಂದಿನಿಂದಲೂ ನಾನು ಕಾಂಗ್ರೆಸ್ಗೆ ಬೆಂಬಲಿಸಿದ್ದನೆ. ಎಸ್.ಎಂ.ಕೃಷ್ಣ, ರಾಜಶೇಖರಮೂರ್ತಿ, ಧೃವನಾರಾಯಣ್ ಅವರಿಗೆ ಮತ ಹಾಕಿದ್ದೀನಿ ಎಂದರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ನನ್ನನ್ನು ಪರಿಷತ್ಗೆ ನಾಮನಿರ್ದೇಶನ ಮಾಡಲು ಮೈಸೂರು ಭಾಗದ ಜನರು ಒತ್ತಾಯ ಮಾಡಿದರು. ಮೈಸೂರಿನ ಎರಡು ಸ್ಥಾನಗಳಲ್ಲಿ ನನಗೆ ಒಂದು ಸ್ಥಾನವನ್ನು ಬೆಂಬಲಿಸಬೇಕು. ನಾನು 60 ವರ್ಷಗಳಿಂದ ಕನ್ನಡ ಪರ ಹೋರಾಟಗಾರ, ಕಾಂಗ್ರೆಸ್ನಿಂದ ಟಿಕೆಟ್ ಕೇಳುವುದು ಸೂಕ್ತವಲ್ಲ ಎಂದರು.




