ಉತ್ತರ ಕನ್ನಡಜಿಲ್ಲಾ ಸುದ್ದಿ

ಮೃತಪಟ್ಟ ಯುವಕನ ಮರಣೋತ್ತರ ಪರೀಕ್ಷೆಗಾಗಿ ಪರದಾಟ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆ ಕಳೆದ್ರೂ ಮೃತ ಯುವಕನ ಮರಣೋತ್ತರ ಪರೀಕ್ಷೆ ನಡೆಸದೇ,ಕುಟುಂಬಸ್ಥರಿಗೆ ಮೃತದೇಹವನ್ನೂ ನೀಡದೇ ಕಣ್ಣೀರಾಕಿಸಿದ ಅಮಾನವೀಯ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕುಂಬಾರವಾಡಾ ನಿವಾಸಿಯಾಗಿರುವ ಸಂತೋಷ್ ಗಾಂವ್ಡೇಕರ್ (24) ಎಂಬವರು ಗೋವಾದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ‌‌ ನಡೆಸುತ್ತಿದ್ದರು.

ಅದ್ಯಾವುದೋ ಕಾರಣಕ್ಕೆ ಮನನೊಂದು ಆತ ಜನವರಿ 16 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಈ ವೇಳೆ ಆತನ ಪರಿಚಯದವರು ಗೋವಾದ ಮಡಗಾಂವ್‌ನ ಆಸ್ಪತ್ರೆಗೆ ದಾಖಲಿಸಿ ಆತನನ್ನು ಹೇಗೋ ಬದುಕಿಸಿಕೊಂಡಿದ್ದರು.

ಎರಡು ದಿನ ಆಸ್ಪತ್ರೆಯಲ್ಲಿದ್ದ ಸಂತೋಷ್ ಬಳಿಕ ಅಲ್ಲಿಂದ ಡಿಸ್ಚಾರ್ಜ್ ಆಗಿ ಬಸ್ ಮೂಲಕ ಕರ್ನಾಟಕ ಗಡಿಯವರೆಗೆ ಬಂದಿದ್ದ.ಅಲ್ಲಿಂದ ಮನೆಯವರು ಆತನನ್ನು ಕರೆದುಕೊಂಡು ಹಿಂತಿರುಗುತ್ತಿದ್ದಾಗ ಮತ್ತೆ ಜೋರಾಗಿ ಹೊಟ್ಟೆನೋವು ಕಾಣಿಸಿದ್ದರಿಂದ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ವಿಷ ಪ್ರಾಶನದಿಂದ ಸಂತೋಷ್‌ಗೆ ಬಹು ಅಂಗಾಂಗ ವೈಫಲ್ಯ ಉಂಟಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಂಜೆ 6 ಗಂಟೆಗೆ ಮೃತಪಟ್ಟಿದ್ದಾನೆ.

ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಮರಣೋತ್ತರ ಪರೀಕ್ಷೆ ನಡೆಸದೇ, ಮೃತದೇಹವನ್ನು ಕುಟುಂಬಸ್ಥರಿಗೆ ನೀಡುವ ಯಾವ ಪ್ರಕ್ರಿಯೆಯನ್ನೂ ನಡೆಸದೇ ಆಸ್ಪತ್ರೆ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದ್ದಾರೆ.

ಸಂತೋಷ್ ಮೃತಪಟ್ಟ ಒಂದು ಗಂಟೆಯ ಬಳಿಕ ಕಾರವಾರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದರು.ತರುವಾಯ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ.
ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಬಹುದು ಎಂದು ಪೊಲೀಸರು ತಿಳಿಸಿದ್ದರು.ಈ ಬಗ್ಗೆ ಕುಟುಂಬಸ್ಥರಿಗೆ ಆಸ್ಪತ್ರೆಯವರು ಸರಿಯಾದ ಮಾಹಿತಿ ನೀಡದ್ದರಿಂದ ತಡರಾತ್ರಿಯವರೆಗೆ ಅವರು ಕಾದು ಕುಳಿತುಕೊಳ್ಳುವಂತಾಯಿತು.

ಮರುದಿನ ಬೆಳಿಗ್ಗೆಯಾದರೂ ಮೃತದೇಹ ಸಿಗಬಹುದು ಎಂದು ಕುಟುಂಬಸ್ಥರು ಕಾದು ಕುಳಿತಿದ್ದರಾದರೂ,ಮರಣೋತ್ತರ ಪರೀಕ್ಷೆ ನಡೆಸುವ ವೈದ್ಯರಿಲ್ಲದೇ ಸಂಜೆಯಾದ್ರೂ ಮೃತದೇಹ ಹಸ್ತಾಂತರವಾಗಿಲ್ಲ.‌ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ಇತರೆ ವೈದ್ಯರಿಗೆ ಕೇಳಿದರೂ ಸಮರ್ಪಕ ಉತ್ತರ ಸಿಗದೇ ಕುಟುಂಬಸ್ಥರು ಹೈರಾಣಾಗಿದ್ದಾರೆ.

ಕೊನೆಗೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ವಿಷಯ ತಿಳಿಸಿದ ಬಳಿಕ ವೈದ್ಯರು ಸಂಜೆ ವೇಳೆ ಪೋಸ್ಟ್‌ ಮಾರ್ಟಂ ನಡೆಸಲು ಮುಂದಾಗಿದ್ದಾರೆ.ಆಸ್ಪತ್ರೆಯ ಅವ್ಯವಸ್ಥೆ ಕುರಿತು ಮೃತನ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದು,ಇಂತಹ ಪರಿಸ್ಥಿತಿ ಇನ್ಯಾರಿಗೂ ಆಗದಂತೆ ಸಂಬಂಧಪಟ್ಟವರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದ ಕುರಿತು ಈ ಹಿಂದಿನಿಂದಲೂ ಆರೋಪಗಳು ಕೇಳಿ ಬರುತ್ತಿವೆ.ಈ ಬಗ್ಗೆ ಮತ್ತೊಮ್ಮೆ ಇದು ಸಾಬೀತಾದಂತಾಗಿದೆ. ಇನ್ನಾದ್ರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತು ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button