ಮುರ್ಡೇಶ್ವರ : ಭದ್ರತೆ ಪರಿಶೀಲಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದ್ರಿನಾಥ್

ಕಾರವಾರ : ಐಸಿಸ್ ಮ್ಯಾಗಜೀನ್ನಲ್ಲಿ ಮುರ್ಡೇಶ್ವರ ಶಿವನ ಮೂರ್ತಿಯನ್ನು ವಿಕೃತಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರ್ಡೇಶ್ವರ ದೇವಸ್ಥಾನಕ್ಕೆ ಭದ್ರತೆ ಒದಗಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ದೇಗುಲಕ್ಕೆ ಕಾರವಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಬದ್ರಿನಾಥ ಅವರು ಭೇಟಿ ನೀಡಿ ಸಿಸಿಟಿವಿ ಅಳವಡಿಕೆ ಹೆಚ್ಚಿಸಿ ಪ್ರತಿನಿತ್ಯ ನಿಗಾ ವಹಿಸುವಂತೆ ಸೂಚನೆ ನೀಡಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಬದ್ರಿನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ತದನಂತರ ಪ್ರಾಂಗಣದ ಸುತ್ತಲೂ ಓಡಾಡಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಪರಿಶೀಲಿಸಿದರು. ಹೆಚ್ಚಿನ ನಿಗಾ ವಹಿಸುವಂತೆ ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ, ನಗರ ಠಾಣಾ ಸಿಪಿಐ ದಿವಾಕರ, ಗ್ರಾಮೀಣ ಠಾಣಾ ಸಿಪಿಐ ಮಹಾಬಲೇಶ್ವರ ನಾಯ್ಕ ಅವರಿಗೆ ಸೂಚನೆ ನೀಡಿದರು.
ಇನ್ನು ಮುರ್ಡೇಶ್ವರದ ಮುಖ್ಯ ಸ್ಥಳದಲ್ಲಿ ಹೊಸದಾಗಿ ಸಿಸಿಟಿವಿ ಅಳವಡಿಕೆ ಹಾಗೂ ಈಗಾಗಲೇ ಅಳವಡಿಸಲಾದ ಸ್ಥಳದಲ್ಲಿ ಸಿಸಿಟಿವಿ ಕಾರ್ಯನಿರ್ವಹಣೆ ಸಮರ್ಪಕವಾಗಿ ಆಗುವಂತೆ ಗಮನ ಹರಿಸಲು ಸೂಚನೆ ನೀಡಿದರು.
ದೇವಾಲಯದ ಆಡಳಿತ ಕಮೀಟಿ ಅವರಿಗೆ ದೇವಾಲಯದ ಆವರಣ,ಪ್ರಾಂಗಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ನಿರ್ವಹಣೆ ಪರಿಶೀಲಿಸಿ ದೃಶ್ಯಾವಳಿ ಸಂಗ್ರಹ ಮಾಡುವಂತೆ ತಿಳಿಸಿದರು. ನಿತ್ಯವೂ ಬಂದು ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಯಾರೇ ಅನುಮಾನಾಸ್ಪದ ರೀತಿ ಓಡಾಟ ಕಂಡು ಬಂದಲ್ಲಿ ಅವರ ತಪಾಸಣೆ, ಮಾಹಿತಿ ಸಂಗ್ರಹಣೆಗೆ ಖಡಕ್ ಸೂಚನೆ ನೀಡಿದರು.
ಇದೇ ವೇಳೆ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ,ಸಿಪಿಐ ಅವರಿಗೆ ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯಿಂದ ದಿನವೂ ಪೆಟ್ರೋಲಿಂಗ್ ಹೆಚ್ಚಿಸುವಂತೆ ಆದೇಶ ನೀಡಿದರು.




