ಶೋಭಾ ಕರಂದ್ಲಾಜೆ ವಿರುದ್ಧ ಉಡುಪಿಯಲ್ಲಿ ತೀವ್ರ ಆಕ್ರೋಶ

ಉಡುಪಿ: ದೇಶವ್ಯಾಪಿ ರೈತ ಸಂಘಟನೆಗಳು ನೀಡಿರುವ ಭಾರತ್ ಬಂದ್ ಕರೆಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಎಡಪಕ್ಷಗಳು ಮತ್ತು ಕಾಂಗ್ರೆಸ್ ಭಾರೀ ಪ್ರತಿಭಟನೆ ಹಮ್ಮಿಕೊಂಡು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಸದೋಭಾ ಕರಂದ್ಲಾಜೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಅಜ್ಜರಕಾಡಿನ ಹುತಾತ್ಮ ಸೈನಿಕ ಸ್ಮಾರಕದ ಎದುರು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು ಮತ್ತು ಪಕ್ಷಗಳ ಮುಖಂಡರು ಕೇಂದ್ರ ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡರು.ಶೋಭಾ ಕರಂದ್ಲಾಜೆ ರೈತ ವಿರೋಧಿ ಎಂದು ಅಕ್ರೋಶ ಹೊರ ಹಾಕಿದ ಮುಖಂಡರು, ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಯವರು ರೈತರನ್ನು ಈ ದೇಶದ ಬೆನ್ನೆಲುಬು ಎಂದು ಹೇಳುತ್ತಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ರೈತರ ಹಿತ ಮರೆತಿದ್ದಲ್ಲದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೇಂದ್ರ ರಾಜ್ಯಗಳ ನೀತಿಗಳು ಕಾರ್ಪೊರೇಟ್ ಗಳ ಪರ ಇದೆ.ಅದು ವಿದ್ಯುತ್ ಮಸೂದೆ ಇರಬಹುದು ,ಕೃಷಿ ಕಾಯ್ದೆ ಇರಬಹುದು.ಎಲ್ಲವೂ ಅದಾನಿ ಅಂಬಾನಿಯಂತಹ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್ ಮತ್ತು ಎಡಪಕ್ಷಗಳ ಮುಖಂಡರು ಸರಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.




