ಕೋಲಾರಜಿಲ್ಲಾ ಸುದ್ದಿ

ವೈದ್ಯರ ನಿರ್ಲಕ್ಷಕ್ಕೆ ಮೂರು ತಿಂಗಳ ಗಂಡು ಮಗು ಸಾವು : ಪೋಷಕರಿಂದ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ

ಕೋಲಾರ : ಚುಚ್ಚು ಮದ್ದು ಮತ್ತು ವೈದ್ಯ ನಿರ್ಲಕ್ಷದಿಂದ ಮೂರು ತಿಂಗಳ ಗಂಡು ಮಗು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಇದರಿಂದ ಪೋಷಕರು ಮೃತ ಮಗುವಿನ ಸಮೇತ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿ ಇದಕ್ಕೆ ಕಾರಣರಾದ ವೈದ್ಯಾಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸೋಮಯಾಜಲಹಳ್ಳಿ ಗ್ರಾಮದ ಸುಬ್ರಮಣಿ ಮತ್ತು ಗಂಗರತ್ನ ದಂಪತಿಗಳ ಮೂರು ತಿಂಗಳ ಗಂಡು ಮಗು ಮೃತ ದುರ್ದೈವಿಯಾಗಿದೆ. ಸೋಮಯಾಜಲಪಲ್ಲಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳ ಚುಚ್ಚುಮದ್ದು ಪಡೆದು ಮನೆಗೆ ವಾಪಸ್ಸಾಗಿದ್ದಾರೆ. ಚುಚ್ಚು ಮದ್ದು ಪಡೆದ ನಂತರ ಗುರುವಾರ ರಾತ್ರಿಯಿಂದ ಮಗುವಿನ ಆರೋಗ್ಯದಲ್ಲಿ ಏರು ಪೇರು ಕಂಡು ಬಂದು ಜ್ವರ ಹಾಗು ವಾಂತಿ ಕಾಣಿಸಿಕೊಂಡಿದೆ.

ಶುಕ್ರವಾರ ಬೆಳಿಗ್ಗೆ ಮಗುವನ್ನು ಆಸ್ಪತ್ರೆಗೆ ಕರೆ ತಂದು ವೈದ್ಯರ ಬಳಿ ತೋರಿಸಿದ್ದಾರೆ. ಮಗುವನ್ನು ತಪಾಸಣೆ ಮಾಡಿದ ವೈದ್ಯರು ಮಗು ಆರೋಗ್ಯವಾಗಿದೆ ಎಂದು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಮತ್ತೆ ಮಗು ಅಳಲಾರಂಭಿಸಿದಾಗ ಮತ್ತೆ ಆಸ್ಪತ್ರೆಗೆ ಕರೆ ತಂದು ವೈದ್ಯಾಧಿಕಾರಿಗೆ ವಿವರಣೆ ನೀಡಿದ್ದಾರೆ. ಈಗಲೂ ಮಗು ಆರೋಗ್ಯವಾಗಿದೆ ಸರಿ ಹೋಗುತ್ತದೆ ನೀವು ಹೆಚ್ಚಿನ ಚಿಕಿತ್ಸೆಗೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಹೋಗಬಹುದು ಎಂದು ಸಲಹೆ ನೀಡಿದ್ದಾರೆ.

ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿ ಮಗುವನ್ನು ತಪಾಸಣೆಗೆ ಒಳಪಡಿಸುವ ಒಳಗಾಗಿ ಮಗು ಮೃತಪಟ್ಟಿತ್ತು. ನಂತರ ಮೃತ ಮಗುವಿನ ಸಮೇತ ಪೋಷಕರು ಸೋಮಯಾಜಲಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ವೈದ್ಯಾಧಿಕಾರಿ ಡಾ.ಸೌಮ್ಯರವರ ನಿರ್ಲಕ್ಷವೇ ಇದಕ್ಕೆ ಕಾರಣ ಹತ್ತು ನಿಮಿಷ ಮುಂಚಿತವಾಗಿ ಶ್ರೀನಿವಾಸಪುರ ಆಸ್ಪತ್ರೆಗೆ ಹೋಗಿದ್ದರೆ ಮಗು ಉಳಿಯುತ್ತಿತ್ತು ಎಂದು ಅಲ್ಲಿನ ವೈದ್ಯಾಧಿಕಾರಿ ತಿಳಿಸಿದರು. ಈ ವಿಷಯವನ್ನು ನಾವು ಬೆಳಿಗ್ಗೆ ಆಸ್ಪತ್ರೆಗೆ ಬಂದಾಗ ನೀವು ಯಾಕೆ ಸಲಹೆ ನೀಡಲಿಲ್ಲ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ವಿರುದ್ದ ತಿರುಗಿ ಬಿದ್ದು ವೈದ್ಯಾಧಿಕಾರಿಯನ್ನು ಆಸ್ಪತ್ರೆಯಲ್ಲಿ ಕೂಡಿ ಹಾಕಿ ಪೋಷಕರು ಹಾಗು ಮೃತ ಮಗುವಿನ ತಂದೆ ತಾಯಿ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದ ಸಾರ್ವಜನಿಕರು ಆಸ್ಪತ್ರೆಯ ಮುಂಭಾಗ ಜಮಾಯಿಸಿ ಇಲ್ಲಿರುವ ವೈದ್ಯರು ಮೊದಲಿನಿಂದಲೂ ರೋಗಿಗಳ ಕೈ ಮುಟ್ಟಿ ನೋಡುವುದಿಲ್ಲ. ವೈದ್ಯರ ದುರಹಂಕಾರವೇ ಇದಕ್ಕೆ ಕಾರಣ ಈಕೆಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ ಸಿ ವಿಜಯ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಹಾಗು ಮಗುವಿನ ಪೋಷಕರನ್ನು ಸಮಾದಾನ ಪಡಿಸಲು ಯತ್ನಿಸಿ ಚುಚ್ಚು ಮದ್ದು ಹಾಗು ವೈದ್ಯರ ನಿರ್ಲಕ್ಷದಿಂದ ಮಗು ಮೃತಪಟ್ಟಂಗೆ ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ ಹಾಲು ಉಣಿಸುವಾಗ ತೊಂದರೆಯಾದಂಗೆ ಕಾಣುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪೋಷಕರು ಕೇಳಲಿಲ್ಲ. ನಂತರ ಮಗುವಿನ ತಂದೆ ಸುಬ್ರಮಣಿ ನನ್ನ ಮಗುವಿನ ಸಾವಿಗೆ ವೈದ್ಯರೇ ಕಾರಣ ಅಥವಾ ಚುಚ್ಚು ಮದ್ದು ಕಾರಣವಿರಬಹುದು ಎಂದು ಆರೋಗ್ಯ ಇಲಾಖೆಯ ವಿರುದ್ದ ದೂರು ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button