ಬೆಳಗಾವಿಯಲ್ಲಿ ಮೂರು ಮಕ್ಕಳ ಸಾವು ಪ್ರಕರಣ : ಇಬ್ಬರು ಅಧಿಕಾರಿಗಳು ಅಮಾನತು!

ಬೆಂಗಳೂರು : ಬೆಳಗಾವಿ ಜಿಲ್ಲೆಯ ಬಿಮ್ಸ್ ನಲ್ಲಿ ಮೂರು ಮಕ್ಕಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್ನಿಂದ ಈ ಮಕ್ಕಳು ಮೃತಪಟ್ಟಿರಬಹುದು. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.
ಮೂವರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖೆಗೆ ಇಬ್ಬರು ಹಿರಿಯ ಅಧಿಕಾರಿಗಳ ನೇಮಕ ಮಾಡಲಾಗಿದೆ. WHO ಅಧಿಕಾರಿ ಡಾ.ಸಿದ್ದಲಿಂಗಯ್ಯ, ಡಾ.ಪ್ರಭು ಬಿರಾದಾರ ನೇಮಕ ಮಾಡಲಾಗಿದೆ. ಇಬ್ಬರು ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಬೆಳಗಾವಿ ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ.ಪ್ರಭು ಬಿರಾದಾರ ತನಿಖೆ ನಡೆಸಲಿದ್ದಾರೆ.
ಸಾವಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾರಣ :
ಮಕ್ಕಳಿಗೆ ರುಬೆಲ್ಲಾ ವ್ಯಾಕ್ಸಿನ್ ನೀಡಲಾಗಿತ್ತು. ಜ.12ರಂದು ಆರೋಗ್ಯ ಇಲಾಖೆ ಸಿಬ್ಬಂದಿ ರುಬೆಲ್ಲಾ ವ್ಯಾಕ್ಸಿನ್ ನೀಡಿದ್ದರು. ಇಂಜೆಕ್ಷನ್ ಪಡೆದ ಬಳಿಕ ವಾಂತಿ ಭೇದಿ ಆರಂಭವಾಯಿತು. ಕೂಡಲೇ ನಾವು ಆಸ್ಪತ್ರೆಗೆ ದಾಖಲು ಮಾಡಿದ್ರೂ ಮಕ್ಕಳು ಬದುಕಲಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಮಕ್ಕಳು ಸಾವನ್ನಪ್ಪಿವೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
