ಕಲಬುರ್ಗಿಜಿಲ್ಲಾ ಸುದ್ದಿ

ಅಧಿಕಾರಿಗಳ ನಿರ್ಲಕ್ಷಕ್ಕೆ ವಿಶೇಷ ಚೇತನರು ಹೈರಾಣ: ದೂಳು ತಿನ್ನುತ್ತಿವೆ ಮೊಪೇಡ್, ತ್ರಿಚಕ್ರ ಸೈಕಲ್

ವೀರೇಶ ಚಿನಗುಡಿ

ಕಲಬುರಗಿ: ವಿಶೇಷ ಚೇತನರಿಗಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಕೋಟ್ಯಾಂತರ ಹಣ ಖರ್ಚು ಮಾಡುತ್ತಿದೆ. ಆದರೆ, ಅಧಿಕಾರಿಗಳ ಬೇಜವಬ್ದಾರಿತನಕ್ಕೆ ಅಂಗವೀಕಲರು ಸರ್ಕಾರಿ ಲಾಭ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ‌. ಅಂಗವಿಕಲರಿಗೆ ವಿತರಣೆ ಮಾಡಬೇಕಾದ ಮೊಪೇಡ್ ಹಾಗೂ ತ್ರಿಚಕ್ರ ಸೈಕಲ್​​​ಗಳು ಇಟ್ಟಲ್ಲೆ ಧೂಳು ತಿನ್ನುತ್ತಿದ್ರೆ ಅಂಗವಿಕಲರು ಸಲಕರಣೆಗಳಿಗಾಗಿ ಪರದಾಡುವಂತಾಗಿದೆ.

ಕಲಬುರಗಿ ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ ಮೊಪೇಡ್ ಹಾಗೂ ತ್ರಿಚಕ್ರ ಸೈಕಲ್ ಗಳನ್ನು ಅರ್ಹ ಫಲಾನುಭವಿಗಳಿಗೆ ಸರಿಯಾದ ಟೈಮ್‌ಗೆ ವಿತರಣೆ ಮಾಡದೆ ಇಟ್ಟಲ್ಲಿಯೇ ಮಳೆ ಬಿಸಿಲಿನಿಂದ ಹಾಳಾಗುತ್ತಿವೆ. ಸುಮಾರು 75 ಮೊಪೇಡ್ ಹಾಗೂ 100 ಕ್ಕೂ ಹೆಚ್ಚು ತ್ರೀ ಚಕ್ರ ಸೈಕಲ್ ಗಳು ಕಳೆದ ಎರಡು ವರ್ಷಗಳಿಂದ ವಿತರಣೆ ಆಗದೆ ಅಂಗವಿಕಲರ ಕಛೇರಿಯಲ್ಲಿಯೇ ಧೂಳು ತಿನ್ನುತ್ತ ಹಾಳಾಗುತ್ತಿವೆ. ಇತ್ತ ಅಂಗವಿಕಲರು ಸಲಕರಣೆಗಳಿಗಾಗಿ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಅಂಗವಿಕಲರಿಗೆ ವಿತರಿಸಲು ಬಂದಿರುವ ಲಕ್ಷಾಂತರ ಮೌಲ್ಯದ ಸಲಕರಣೆಗಳಿಗೆ ಇಡಲು ಇಲಾಖೆ ಕಚೇರಿಯಲ್ಲಿ ಸೂಕ್ತ ಸ್ಥಳ ಕೂಡಾ ಇಲ್ಲದಂತಾಗಿದೆ. ಕಚೇರಿಯ ಆವರಣದಲ್ಲಿ ಓಪನ್ ಆಗಿ ಇಟ್ಟಿರೋದರಿಂದ ವಾಹನಗಳು, ಸೈಕಲ್ ಗಳು ತುಕ್ಕು ಹಿಡಿದು ಹಾಳಾಗುವಂತಾಗಿದೆ. ಒಂದಡೆ ಇಟ್ಟಲ್ಲೆ ಸಲಕರಣೆಗಳು ಧೂಳು ತಿನ್ನುತಿದ್ರೆ ಅಂಗವಿಕಲರು ಮಾತ್ರ ಕಳೆದ ಹಲವು ವರ್ಷಗಳಿಂದ ಮೊಪೇಡ್ ಹಾಗೂ ಸೈಕಲ್ ಗಳಿಗಾಗಿ ಹತ್ತಾರು ಬಾರಿ ಅರ್ಜಿ ಸಲ್ಲಿಸಿ, ಜನಪ್ರತಿನಿಧಿಗಳ, ಅಧಿಕಾರಿಗಳ ಕಚೇರಿಗೆ ಓಡಾಡಿದ್ರು ಕೊಡುತ್ತಿಲ್ಲ. ಅಂತಾ ಆರೋಪ ಮಾಡುತ್ತಿದ್ದಾರೆ. ಸಲಕರಣೆಗಳ ವಿತರಣೆ ಬಗ್ಗೆ ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದೀಕ್ ಹುಸ್ಸೇನ್ ಅವರನ್ನ ಕೇಳಿದ್ರೆ ಫಲಾನುಭವಿಗಳು ಬಂದು ಸಲಕರಣೆಗಳು ಪಡೆಯುತ್ತಿಲ್ಲ ಅಂತಾ ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ದೇವರು ಕೊಟ್ಟರು ಪೂಜಾರಿ ಕೊಡುತ್ತಿಲ್ಲ ಅನ್ನೋ ಮಾತಿನಂತೆ, ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡಿ ಅಂಗವಿಕಲರ ಅನುಕೂಲಕ್ಕಾಗಿ ಮೊಪೇಡ್, ಸೈಕಲ್ ಗಳನ್ನು ಇಲಾಖೆಗೆ ನೀಡಿದ್ರು ಅಧಿಕಾರಿಗಳ ಬೇಜವಾಬ್ದಾರಿ ನಿರ್ಲಕ್ಷ್ಯದಿಂದ ವರ್ಷಗಳಿಂದ ಸಲಕರಣೆಗಳು ವಿತರಣೆ ಅಗದೆ ದೂಳು ತಿನ್ನುತ್ತ ಹಾಳಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇನ್ನಾದರೂ ಅರ್ಹರಿಗೆ ಇವುಗಳನ್ನು ಒದಗಿಸುವ ಕೆಲಸ ಆಗಬೇಕಿದೆ.

Related Articles

Leave a Reply

Your email address will not be published. Required fields are marked *

Back to top button