Breaking NewsLatestಜಿಲ್ಲಾ ಸುದ್ದಿದಾವಣಗೆರೆ

ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ ಹೋರಾಟ: ಶ್ರೀರಾಮ ಸೇನೆ ರಾಜ್ಯ ಘಟಕ ಎಚ್ಚರಿಕೆ

ದಾವಣಗೆರೆ: ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿರುವುದು ಅಕ್ಷಮ್ಯ ಅಪರಾಧ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಹಿಂದೂ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಬಂದರೆ ಅವಕಾಶ ನೀಡಲಾಗುತ್ತಾ. ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ್ ಕುಲಕರ್ಣಿ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸರ್ಕಾರ ರೂಪಿಸಿರುವ ನಿಯಮಾವಳಿ ಪಾಲಿಸಬೇಕು. ಮುಂಬರುವ ದಿನಗಳಲ್ಲಿ ಶಾಲಾ ಕಾಲೇಜಿಗೆ ಸೀರೆ, ಲಂಗ ದವಣಿ ಸೇರಿದಂತೆ ಬೇರೆ ಬೇರೆ ವಸ್ತ್ರ ಧರಿಸಿ ಬಂದರೆ ಅವಕಾಶ ಕೊಡಲು ಆಗದು. ಹಿಜಾಬ್ ಧರಿಸಿ ಶಾಲೆಗೆ ಬರಲು ಅನುಮತಿ ನೀಡಬೇಕೆಂದು ವಿದ್ಯಾರ್ಥಿನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದವರ ಹಿಂದೆ ಕೈವಾಡ ಇದೆ. ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.

ಜ್ಞಾನ ಮಂದಿರದಲ್ಲಿ ಕೋಮುವಾದಿ ಬಿತ್ತುತ್ತಿರುವುದಕ್ಕೆ  ಖಂಡನೆ ವ್ಯಕ್ತಪಡಿಸಿದ ಅವರು ಉಡುಪಿಯ ಕಾಲೇಜಿನಲ್ಲಿ ಕೋಮುವಾದಿ ಬಿತ್ತುತ್ತಿರುವವರ ನಡೆಯನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸುತ್ತದೆ.

ಹಿಜಾಬ್  ಪ್ರಕರಣಕ್ಕೆ ಕುಮ್ಮಕ್ಕು ನೀಡಿರುವವರನ್ನು ಕಂಡುಹಿಡಿದು ತಕ್ಕ ಶಾಸ್ತಿ ಮಾಡಬೇಕು.ಕರಾವಳಿ ಭಾಗದಲ್ಲಿ ಎಸ್ ಡಿಪಿಐ, ಪಿಎಫ್ಐ, ಸಂಘಟನೆಗಳು ವ್ಯಾಪಕವಾಗಿ ಬೆಳೆಯುತ್ತಿದ್ದು, ಇಂತಹ ಸ್ಥಿತಿಗೆ ಕಾರಣವಾಗಿದೆ. ಇವರ ಧರ್ಮದ ಆಚರಣೆಗಳನ್ನು ದರ್ಗಾ, ಮಸೀದಿ, ಮದರಸಾಗಳಲ್ಲಿ ಇಟ್ಟುಕೊಳ್ಳಲಿ. ಇಲ್ಲಿ ಸುಮ್ಮನೆ ಕೂರಲಿ. ಇದೇ ರೀತಿ ಉದ್ಧಟತನ ಮುಂದುವರೆಸಿದರೆ ನಾವೂ ಸಹ ವಸ್ತ್ರ ಸಂಹಿತೆ ಹೀಗೆ ಇರಬೇಕೆಂದು ಹೋರಾಟ ಮಾಡಲಿದ್ದೇವೆ. ಇಂತಹ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸುತ್ತೇವೆ. ಕೂಡಲೇ ಸರ್ಕಾರ ಇದನ್ನು ಹತ್ತಿಕ್ಕಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಕೋವಿಡ್ ನೆಪದಲ್ಲಿ ಸಂಪ್ರದಾಯಗಳನ್ನು ಹತ್ತಿಕ್ಕಲಾಗುತ್ತಿದ್ದು, ಶ್ರೀರಾಮ ಸೇನೆ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಹೆಚ್ಚು ಕಡಿಮೆ ಎಲ್ಲಾ ಕೋವಿಡ್ ನಿಯಮಗಳನ್ನು ಸರ್ಕಾರ  ವಾಪಾಸ್ ತೆಗೆದುಕೊಳ್ಳಲಾಗಿದೆ.  ಆದರೆ ದೇವಸ್ಥಾನದ ಜಾತ್ರೆಗಳು, ಉತ್ಸವಗಳಿಗೆ ಮಾತ್ರ ನಿರ್ಬಂಧ ಹೇರಿರುವುದನ್ನು ಸೇನೆ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.

ಸಂಕ್ರಾಂತಿಯಿಂದಲೇ ರಾಜ್ಯದ ಎಲ್ಲಾ ಧರ್ಮಕ್ಷೇತ್ರ ಗಳಲ್ಲಿ ಜಾತ್ರಾ ಮಹೋತ್ಸವಗಳು ಪ್ರಾರಂಭವಾಗುತ್ತವೆ. ಭರತ ಹುಣ್ಣಿಮೆಯಂದು, ಮೈಲಾರ ಲಿಂಗೇಶ್ವರ ಜಾತ್ರೆ, ಉಳವಿ ಚನ್ನಬಸವ, ಸವದತ್ತಿ ಯಲ್ಲಮ್ಮ, ಚಿಂಚೋಳಿ ಮಾಯಮ್ಮ, ದಾವಣಗೆರೆ ದುಗ್ಗಮ್ಮ , ಗೋಕರ್ಣ, ಹುಬ್ಬಳ್ಳಿ ಸಿದ್ಧಾರೂಢರ ಹಾಗೂ ಹುಲಿಗೆಮ್ಮ ಸೇರಿದಂತೆ ಅನೇಕ ಜಾತ್ರೆಗಳು ನಡೆಯುವ ಸಂದರ್ಭದಲ್ಲಿ ಈ ರೀತಿಯ ನಿರ್ಬಂಧಗಳನ್ನು ಹಾಕಿರುವುದು  ಸರಿಯಲ್ಲ ಎಂದರು.

ಸರ್ಕಾರ ಹಿಂದೂ ಆಚರಣೆಗಳ ಮೇಲೆ ಸವಾರಿ ಮಾಡುತ್ತಿದೆ. ಜಾತ್ರೆಗಳು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ರೈತರು ಬೆಳೆದ ಉತ್ಪನ್ನಗಳಿಗೆ, ವ್ಯಾಪಾರಸ್ಥರಿಗೆ, ಕಲಾವಿದರಿಗೆ ಹೊಟ್ಟೆ ಪಾಡಿನ ವಿಚಾರವಾಗಿದೆ. ನಿರ್ಬಂಧ ವಾಪಾಸ್ ಪಡೆಯದಿದ್ದರೆ ಇದೇ ಫೆ.4ರಂದು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಭಕ್ತರು, ವ್ಯಾಪಾರಸ್ಥರ ಜೊತೆ ಸೇರಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button