ಹೂವು ಹಿಡಿದಷ್ಟು ಸಲೀಸು ಹಾವು ಹಿಡಿಯುವುದು: ಸ್ನೇಕ್ ಪ್ರಶಾಂತ ಕಾರ್ಯಕ್ಕೆ ಕಲಬುರಗಿ ಜನರ ಮೆಚ್ಚುಗೆ

ವರದಿ: ವೀರೇಶ ಚಿನಗುಡಿ
ಕಲಬುರಗಿ: ಹಾವು ಕಂಡರೆ ಮಾರುದ್ದ ಓಡುವವರೆ ಹೆಚ್ಚು, ಇಲ್ಲೊಬ್ಬ ಉರಗ ಪ್ರೇಮಿ ಮಾತ್ರ ಹೂವು ಹಿಡಿದಂತೆ ಸಲಿಸಾಗಿ ಹಾವುಗಳನ್ನು ಹಿಡಿಯುತ್ತಾನೆ. ಇಲ್ಲಿವರೆಗೆ ಸುಮಾರು 21 ಸಾವಿರಕ್ಕೂ ಅಧಿಕ ಹಾವು ಹಿಡಿಯುವ ಮೂಲಕ ಸ್ನೇಕ ಪ್ರಶಾಂತ ಅಂತ ಹೆಸರು ವಾಸಿಯಾಗಿದ್ದಾನೆ.
ಸ್ನೇಕ್ ಪ್ರಶಾಂತ ಕಲಬುರಗಿಯ ಮುಕ್ತಾಂಪುರ ಬಡಾವಣೆಯ ನಿವಾಸಿಯಾಗಿದ್ದು, ಜೀವನೋಪಾಯಕ್ಕೆ ಅಟೋ ಚಾಲಕನಾಗಿದ್ದಾನೆ. ಎಲ್ಲೆ ಇದ್ದರೂ ಹಾವು ಬಂದಿರುವ ವಿಷಯ ಕಿವಿಗೆ ಬಿದ್ದರೆ ತಟ್ಟಂತ ಹಾಜರಾಗ್ತಾನೆ. ಇಲ್ಲಿವರೆಗೆ ಹಲವಡೆ ಕಾಣಿಸಿಕೊಂಡ ನಾನಾ ತಳಿಯ 21 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ನಿರ್ಜನ ಪ್ರದೇಶಕ್ಕೆ ಬಿಟ್ಟಿರುವ ಇತಿಹಾಸ ಈತನಿಗಿದೆ.
ಸ್ನೇಕ ಪ್ರಶಾಂತ ಹಾವು ಹಿಡಿಯುವ ಯಾವುದೆ ಟ್ರೇನಿಂಗ್ ತೆಗೆದುಕೊಂಡವನಲ್ಲ, ಒಂದು ದಿನ ತಮ್ಮ ಪರಿಚಯಸ್ಥರ ಮನೆಯಲ್ಲಿ ಹಾವು ಬಂದಾಗ ಧೈರ್ಯ ಮಾಡಿ ಅದನ್ನು ರಕ್ಷಿಸಿದ್ದಾನೆ. ಬಳಿಕ ಇಲ್ಲಿವರೆಗೆ ಉರಗ ರಕ್ಷಣೆಯ ಕಾಯಕ ಮುಂದುವರೆಸಿದ್ದಾನೆ. ಹತ್ತು ಬಾರಿ ಹಾವು ಕಡಿದು ಜೀವನ್ಮರಣದ ನಡುವೆ ಹೋರಾಟವನ್ನು ಮಾಡಿದ್ದಾನಂತೆ ಈ ಪ್ರಶಾಂತ, ವಿಷಕಾರಿ ನಾಗರಹಾವು ಸೇರಿದಂತೆ ಬಹುತೇಖ ತಳಿಯ ಹಾವುಗಳನ್ನು ಪ್ರಶಾಂತ ರಕ್ಷಣೆ ಮಾಡಿದ್ದಾನೆ. ಹಣಕ್ಕಾಗಿ ಬೇಡಿಕೆ ಇಡದೆ ಊಚಿತ ಸರ್ವಿಸ್ ನೀಡುವ ಸ್ನೇಕ್ ಪ್ರಶಾಂತ, ಕಲಬುರಗಿಯ ಎಲ್ಲಿಂದಲೇ ಕಾಲ್ ಬಂದರೂ ತಕ್ಷಣ ಹಾಜರಾಗ್ತಾನೆ.
ಹಾವು ವಿಷಕಾರಿ ಆದರೂ ಅದಕ್ಕೆ ತೊಂದರೆ ಆಗುವರೆಗೆ ಕಚ್ಚುವದಿಲ್ಲ, ಹಾವಿಗೆ ತೊಂದರೆ ಕೊಡುವದು, ಜೀವ ಹೊಡೆಯುವದನ್ನು ಯಾರು ಮಾಡಬಾರದು. ಎಲ್ಲಿಯೇ ಹಾವು ಕಂಡರೆ ನನಗೆ ಕರೆ ಮಾಡಿ, ಹಾವು ಹಿಡಿಯುವ ದುಸ್ಸಾಹಸ ಮಾಡುವದಾಗಲಿ ಕೊಂದು ಹಾಕುವದಾಗಿ ಮಾಡಬೇಡಿ ಅನ್ನೋದು ಸ್ನೇಕ ಪ್ರಶಾಂತ ಮನವಿ. ಹಾವು ಕಾಣಿಸಿಕೊಂಡರೆ ಈ ನಂಬರ್ ಗಳಿಗೆ ಕರೆ ಮಾಡಬಹುದು 7411431430/ 7411431414 ಪ್ರಶಾಂತ ಪಾಟೀಲ್.
12 ಅಡಿಯ ಹೆಬ್ಬಾವು ರಕ್ಷಣೆ:
ಕಲಬುರಗಿ ತಾಲೂಕಿನ ಸರಡಗಿ ಬಳಿಯ ಗುಳ್ಳೆವಾಡ ಗ್ರಾಮದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ 19 ಕೆಜಿ ತೂಕದ 12 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸುವಲ್ಲಿ ನಿನ್ನೆ ಸ್ನೇಕ್ ಪ್ರಶಾಂತ ಯಶಸ್ವಿಯಾಗಿದ್ದಾನೆ. ಸೆರೆಹಿಡಿದ ಹಾವನ್ನು ಕಾಡಿನಲ್ಲಿ ಬಿಟ್ಟಿದ್ದಾನೆ. ಪ್ರಶಾಂತನ ಈ ಧೈರ್ಯಕ್ಕೆ ಜಿಲ್ಲೆಯ ಜನತೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.




