ಸ್ಮಾರ್ಟ್ ಸಿಟಿ ನಿರ್ವಹಣೆ ಪಾಲಿಕೆ ವ್ಯಾಪ್ತಿಗೆ: ಸಚಿವ ಬೈರತಿ ಬಸವರಾಜು

ಬೆಳಗಾವಿ : ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡ ನಂತರ ಅದರ ನಿರ್ವಹಣೆಯನ್ನು ಆಯಾ ಪಾಲಿಕೆಗಳಿಗೆ ವಹಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.
ವಿಧಾನಪರಿಷತ್ನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ತಿಪ್ಪೆಸ್ವಾಮಿ ಅವರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೀದಿ ದೀಪ, ರಸ್ತೆ ಸೇರಿದಂತೆ ಹಲವಾರು ಕಾಮಗಾರಿಗಳ ಜವಾಬ್ದಾರಿಯನ್ನು ಆಯಾ ಪಾಲಿಕೆಗಳಿಗೆ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಯ ಶೇ.72ರಷ್ಟು ಪೂರ್ಣಗೊಂಡಿದೆ. ಯೋಜನೆಗೆ ಈವರೆಗೆ 570 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು. ರಾಜ್ಯದಲ್ಲಿ ಏಳು, ದೇಶದಲ್ಲಿ 110 ಸ್ಮಾರ್ಟ್ಸಿಟಿ ಯೋಜನೆಗಳು ಜಾರಿಯಲ್ಲಿವೆ. ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ ಸ್ಮಾರ್ಟ್ ಯೋಜನೆ ಜಾರಿಯಲ್ಲಿರುವ ನಗರಗಳಿಗೆ ಹಲವು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ತಿಳಿಸಿದರು.
ಉಡುಪಿಗೆ ಶುದ್ಧ ಕುಡಿಯುವ ನೀರು
ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಡುಪಿ ನಗರಕ್ಕೆ ಶುದ್ಧ ಕುಡಿಯುವ ನೀರಿನ ಯೋಜನೆ 2023 ವರ್ಷಕ್ಕೆ ಪೂರ್ಣಗೊಳಿಸುವ ಉದ್ದೇಶವಿದೆ. ಯೋಜನೆಯ ಟೆಂಡರ್ ಮೊತ್ತ 277.30 ಕೋಟಿ ರೂ.ಗಳಾಗಿದೆ. ನಿಗದಿತ ಅವಧಿಯಲ್ಲೇ ಪೂರ್ಣಗೊಳ್ಳಲಿದೆ ಎಂದರು.
ವರಾಹಿ ನಾಲೆ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದೆ, ಹಾಗಾಗಿ ನದಿ ಮೂಲದಿಂದ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಖಾಸಗಿ ಕಂಪೆನಿಯ ವಿದ್ಯುತ್ ಉತ್ಪಾದನೆಗೆ ಸಹಕರಿಸುವ ಉದ್ದೇಶ ಈ ಯೋಜನೆಯಲ್ಲಿ ಇಲ್ಲ. ನೀರು ಹರಿಸುವ ಮಾರ್ಗ ಮಧ್ಯೆ 23 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಸಚಿವ ಬಸವರಾಜು ತಿಳಿಸಿದರು.




