Breaking Newsಉತ್ತರ ಕನ್ನಡಜಿಲ್ಲಾ ಸುದ್ದಿ

ಶಿರಸಿ ಮಾರಿಕಾಂಬಾ ದೇವಿ ಸೇವೆಗೆ ದುಬಾರಿ ಶುಲ್ಕ : ಭಕ್ತರ ಆಕ್ರೋಶ

ಕಾರವಾರ : ರಾಜ್ಯದ ಶಕ್ತಿಪೀಠದಲ್ಲಿ ಒಂದೆನಿಸಿ ಲಕ್ಷಾಂತರ ಭಕ್ತರನ್ನು ಸೆಳೆಯುವ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಧಾರ್ಮಿಕ ಸೇವೆಗಳಿಗೆ ಆಡಳಿತ ಮಂಡಳಿ ಇದೀಗ ದುಬಾರಿ ಶುಲ್ಕ ವಿಧಿಸಲು ಹೊರಟಿದೆ. ಈ ಕುರಿತು ಆಡಳಿತ ಮಂಡಳಿ ಸಭೆ ನಡೆಸಿ ಕರಡು ಪ್ರತಿ ಹೊರಡಿಸಿ ದೇವಸ್ಥಾನದ ಸೂಚನಾ ಫಲಕಕ್ಕೆ ಹಾಕಿದ್ದು ಸೆ.5 ರ ಒಳಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಕೋರಿದೆ.

ಕಳೆದ ಹಲವು ವರ್ಷದಿಂದ ಸ್ಥಿರತೆ ಕಂಡುಕೊಂಡಿದ್ದ ಸೇವಾ ದರವನ್ನು ಪರಿಷ್ಕರಿಸಲು ಹಾಲಿ ಧರ್ಮದರ್ಶಿ ಮಂಡಳಿ ನಿರ್ಧರಿಸಿದೆ. ಬಹುತೇಕ ಎಲ್ಲ ಸೇವೆಗಳ ದರವನ್ನು ಪ್ರಸ್ತುತಕ್ಕಿಂತ ದುಪ್ಪಟ್ಟು ಹೆಚ್ಚಿಸಲಾಗಿದೆ.

ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆಗೆ ರೂ10ರ ಬದಲು ರೂ 100, ಮೃತ್ಯುಂಜಯ ಶಾಂತಿಗೆ ರೂ 1001 ಬದಲು ರೂ 3500, ಸತ್ಯನಾರಾಯಣ ಕಥೆಗೆ ರೂ 325ರ ಬದಲು ರೂ 1500ಕ್ಕೆ, ನಿರಂತರ ಪಲ್ಲಕ್ಕಿ ಸೇವೆ ದರ ರೂ 6,001 ರಿಂದ ರೂ 25,000ಕ್ಕೆ ಏರಿಕೆ ಮಾಡಲಾಗಿದೆ.

ಕಾರ್ತೀಕ ದೀಪೋತ್ಸವದ ಒಂದು ದಿನದ ಸೇವೆ ಮೊತ್ತವನ್ನು ರೂ 650 ರಿಂದ ರೂ 5,000, ಶಾಶ್ವತ ಸೇವೆಗೆ ರೂ 6001ರ ಬದಲು ರೂ 10,001, ನಿರಂತರ ಸೇವೆ ಪಾರಾಯಣ ರೂ 2001ರ ಬದಲಾಗಿ ರೂ 5,000, ಶಾಶ್ವತ ಸೇವೆಗೆ ರೂ 6001ರ ಬದಲು 10 ಸಾವಿರಕ್ಕೆ ಏರಿಕೆ ಮಾಡಿ ಕರಡು ಪಟ್ಟಿಯಲ್ಲಿ ಪ್ರಕಟಣೆ ಮಾಡಿದೆ.

ಆದರೆ ಇದೀಗ ಧರ್ಮದರ್ಶಿ ಮಂಡಳಿಯ ಈ ಕ್ರಮ ಭಕ್ತರಲ್ಲಿ ವಿರೋಧಕ್ಕೆ ಕಾರಣವಾಗಿದೆ. ಕೊರೊನಾ ಸಂದರ್ಭದಲ್ಲಿ ಈ ರೀತಿ ಏಕಾ ಏಕಿ ಏರಿಕೆ ಸರಿಯಲ್ಲ. ದೇವಸ್ಥಾನವು ವ್ಯಾಪಾರ ಕೇಂದ್ರವಲ್ಲ, ಕೇಂದ್ರ. ಹೀಗೆ ಭಕ್ತರ ನಂಬಿಕೆ ಮೇಲೆ ಹಣ ಹೊಂದಿಸುವ ಕೆಲಸ ಸರಿಯಲ್ಲ ಎಂಬ ಅಭಿಪ್ರಾಯ ಇದೀಗ ಭಕ್ತ ವಲಯದಲ್ಲಿ ಕೇಳಿ ಬಂದಿದೆ.

ಇನ್ನು ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿರುವ ಮಾರಿಕಾಂಬಾ ದೇವಸ್ಥಾನ ಧರ್ಮದರ್ಶಿ ಮಂಡಳದ ಅಧ್ಯಕ್ಷ ರವೀಂದ್ರ ಜಿ.ನಾಯ್ಕ ಅವರು ಈಗಿನ ಕಾಲಮಾನಕ್ಕೆ ಅನುಗುಣವಾಗಿ ಸೇವಾದರ ಪರಿಷ್ಕರಿಸಲು ನಿಯಮದ ಪ್ರಕಾರ ಮುಂದಾಗಿದ್ದೇವೆ. ಭಕ್ತರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಅವರ ಅಭಿಪ್ರಾಯ ಪಡೆದು ಅಂತಿಮ ನಿರ್ಣಯವಾಗುತ್ತದೆ ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button