ಶವ ಹುಡುಕಲು ಹೋದ ವೇಳೆ ಬೋಟ್ ಗೆ ತಗುಲಿದ ವಿದ್ಯುತ್ ತಂತಿ : ಮೂವರ ದಾರುಣ ಸಾವು

ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ವ್ಯಕ್ತಿಯ ಶವ ಹುಡುಕಾಡುವ ವೇಳೆ ಬೋಟ್ ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ದನ್ನೂರು ಗ್ರಾಮದ ಬಳಿ ನಡೆದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರನಾಳ ಗ್ರಾಮದ ನಿವಾಸಿ ಶಿವಪ್ಪ (70) ಎಂಬುವರು ಕೃಷ್ಣ ನದಿಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಜ್ಜನ ಮೃತ ದೇಹವನ್ನು ಹುಡುಕಲು ಹೋದ ಮೊಮ್ಮಗ ಶರಣಪ್ಪ(30), ಮೃತ ವ್ಯಕ್ತಿಯ ಸಹೋದರನ ಮಗ ಯಮಮಪ್ಪ(35) ಹಾಗೂ ಬೋಟ್ ಚಾಲಕ ಪರಸಪ್ಪ (30)ಎಂಬುವರು ಬಲಿಯಾಗಿದ್ದಾರೆ.
ನಾರಾಯಣಪುರ ಜಲಾಶಯದ ಕೃಷ್ಣ ನದಿಯ ಹಿನ್ನೀರಿನಲ್ಲಿ ಮುಳುಗಡೆ ಆಗಿರುವ ವಿದ್ಯುತ್ ಕಂಬದ ಹತ್ತಿರ ಹೋದ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಈ ವೇಳೆ ಬೋಟ್ ಗೆ ಶಾರ್ಟ್ ಸರ್ಕ್ಯೂಟ್ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿದ್ದ ಅಜ್ಜನ ಮೃತದೇಹ ಸಿಕ್ಕಿದೆ.
ಈಗ ಮೃತಪಟ್ಟಿರುವ ಮೂವರ ಮೃತ ದೇಹದ ಶೋಧ ಕಾರ್ಯ ಮುಂದುವರೆದಿದೆ.ಹುನಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸ್, ಅಗ್ನಿ ಶಾಮಕ ದಳ ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ಮುಂದುವರೆದಿದೆ.




