ವಿಳಂಬಗತಿಯಲ್ಲಿ ಸಾಗಿದ ಹೆದ್ದಾರಿ ಕಾಮಗಾರಿ: ಜನರಿಗೆ ನಿತ್ಯ ಧೂಳಿನ ಸ್ನಾನ!

ಕಿರುಗುಂದ ರಫೀಕ್
ಚಿಕ್ಕಮಗಳೂರು: ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿಗಾಗಿ ರಸ್ತೆಗಳನ್ನ ಅಲ್ಲಲ್ಲಿ ಅಗೆಯಲಾಗಿದ್ದು, ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದ್ದು ನಿತ್ಯ ಧೂಳಿನ ಸ್ನಾನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಮೂಡಿಗೆರೆಯಿಂದ ಕೊಟ್ಟಿಗೆ ಹಾರದವರೆಗೆ ಸಾಕಷ್ಟು ಕಡೆ ರಸ್ತೆಗಳನ್ನ ಅಗೆಯಲಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹಗಳು ಓಡಾಡುತ್ತಿದ್ದು ಇದ್ರಿಂದ ಅಕ್ಕಪಕ್ಕದ ಗ್ರಾಮಸ್ಥರಿಗೆ ತೊಂದರೆ ಉಂಟಾಗಿದೆ. ಅನೇಕ ಪ್ರವಾಸಿ ತಾಣಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ನಿತ್ಯ ಕೆಲಸ ಹೋಗುವ ಜನರು ಇದೇ ರಸ್ತೆಯನ್ನ ಅವಲಂಬಿಸಿದ್ದಾರೆ. ಹೀಗಾಗಿ ಇಲ್ಲಿನ ಅಕ್ಕ ಪಕ್ಕದ ನಿವಾಸಿಗಳಿಗೆ ಈ ದೂಳಿನಿಂದ ಕೆಲವೊಂದಷ್ಟು ಖಾಯಿಲೆಗಳು ಬಂದಿದ್ದು ಮನೆಯಿಂದ ಹೊರ ಬರೋಕು ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆದ್ದಾರಿ ಕಾಮಗಾರಿ ವೇಳೆ ಧೂಳು ನಿಯಂತ್ರಣಕ್ಕೆ ರಸ್ತೆಗೆ ನಿತ್ಯ ಎರಡು ಮೂರು ಬಾರಿ ನೀರು ಹಾಕಬೇಕೆಂಬ ನಿಯಮವಿದೆ. ಆದ್ರೆ ಇಲ್ಲಿ ಮಾತ್ರ ಇಂಥಹ ಯಾವುದೇ ನಿಯಮವನ್ನು ಪಾಲಿಸುತ್ತಿಲ್ಲ. ಜೊತೆಗೆ ರಸ್ತೆಗೆ ಡಾಂಬರ್ ಹಾಕುತ್ತಿಲ್ಲವೆಂದು ಇಲ್ಲಿನ ಹಳ್ಳಿಗರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ತಮ್ಮ ಮನೆಯ ಮುಂಭಾಗದ ರಸ್ತೆಗಳಿಗೆ ತಾವೇ ನೀರು ಹಾಕಿಕೊಳ್ಳುತ್ತ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ದಿನಕ್ಕೆ ನಾಲ್ಕೈದು ಬಾರಿ ತಮ್ಮ ಮನೆ ಮುಂದೆ ತಾವೇ ನೀರು ಹಾಕಿಕೊಳ್ಳುತ್ತಿದ್ದೇವೆ. ಧೂಳಿನಿಂದಾಗ ನಮಗೆ ನೆಮ್ಮದಿಯೇ ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಅಥವಾ ಪ್ರತೀದಿನ ಧೂಳಿನ ರಸ್ತೆಗೆ ನಾಲ್ಕೈದು ಬಾರಿ ನೀರು ಹಾಕಿಸಿ ಎಂದು ಸ್ಥಳಿಯ ನಿವಾಸಿಗಳು ಒತ್ತಾಯಿಸಿದ್ದಾರೆ.




