ಕಾಸರಕೋಡಿನ ಕಡಲ ತೀರದಲ್ಲಿ ಅಪರೂಪದ ರಿಡ್ಲೆ ಜಾತಿಯ ಕಡಲಾಮೆ ಸಾವು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ಸಮೀಪ ಸಂತಾನಾಭಿವೃದ್ಧಿಗಾಗಿ ಮೊಟ್ಟೆ ಇಡಲು ಬಂದಿದ್ದ ಅಪರೂಪದ ರಿಡ್ಲೆ ಜಾತಿಯ ಕಡಲಾಮೆ ಮೃತಪಟ್ಟಿದೆ. ಟೊಂಕದ ಕಡಲ ತೀರದಲ್ಲಿ ಕಡಲಾಮೆ ಕಳೇಬರ ಪತ್ತೆಯಾಗಿದೆ. ಕಳೆದ ಎರಡು ದಿನದಿಂದ ಈ ಆಮೆ ಕಡಲ ತೀರದಲ್ಲಿ ಮೊಟ್ಟೆ ಇಡಲು ಬಂದಿತ್ತು.ಈ ಸಂದರ್ಭದಲ್ಲಿ ಕಡಲ ತೀರದಲ್ಲಿ ಬಂದರು ನಿರ್ಮಾಣಕ್ಕಾಗಿ ರಸ್ತೆ ಮಾಡಲಾಗುತ್ತಿದ್ದು, ಈ ವೇಳೆ ಸಾವು ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ.
ಆಮೆ ಸಾವಿಗೆ ಅನುಮಾನ ವ್ಯಕ್ತಪಡಿಸಿದ ಮೀನುಗಾರರು :
ಮಂಗಳವಾರ ಸಂಜೆ ಸ್ಥಳೀಯ ಮೀನುಗಾರರು ಈ ಘಟನೆ ಗಮನಿಸಿದ್ದು, ಕಡಲ ತಡಿಯಲ್ಲಿ ರಕ್ತಸಿಕ್ತವಾದ ಸ್ಥಿತಿಯಲ್ಲಿ ಕಡಲಾಮೆ ಕಳೇಬರ ಪತ್ತೆಯಾಗಿದೆ. ಸ್ಥಳೀಯ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ಕಾವಲು ಸಿಬ್ಬಂದಿಗಳು ಹೊಡೆದು ಸಾಯಿಸಿರುವ ಅಮಾನವೀಯ ಕೃತ್ಯ ಎಸಗಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಕೊಂಕಣ ಖಾರ್ವಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಕಡಲಾಮೆಗಳ ಮೀನುಗಾರರಿಗೆ ಪೂಜ್ಯನೀಯ ಭಾವನೆ ಇದೆ.ಹಿಂದೆ ಮೀನುಗಾರರು ಸಮುದ್ರದಲ್ಲಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಾಗ ವಿಷ್ಣು ಕೂರ್ಮಾವತಾರದಲ್ಲಿ ಬಂದು ಮೀನುಗಾರರನ್ನು ರಕ್ಷಿಸಿದ್ದನು ಎನ್ನುವ ಪ್ರತೀತಿ ಇದೆ. ಹೀಗಾಗಿ ಆಮೆಗಳ ಬಗ್ಗೆ ಮೀನುಗಾರರಿಗೆ ಅದರಲ್ಲೂ ಕೊಂಕಣ ಖಾರ್ವಿ ಸಮಾಜದವರಿಗೆ ವಿಶೇಷವಾದ ಭಾವನೆ ಇದೆ. ಇಲ್ಲಿ ನಿಷೇದಾಜ್ಞೆ ನಡುವೆಯೇ ವಾಣಿಜ್ಯ ಬಂದರು ಕಂಪನಿಯವರು ಕಡಲಾಮೆಗಳನ್ನು ಸಾಯಿಸಿ ಅವುಗಳ ಮಾರಣಹೋಮ ನಡೆಸುತ್ತಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಹೊನ್ನಾವರ ಪೋರ್ಟ್ ಪ್ರೈವೇಟ್ ಕಂಪನಿಯ ಮತ್ತು ಅದರ ಕಾವಲು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸ್ಥಳೀಯ ಕೊಂಕಣ ಖಾರ್ವಿ ಸಮಾಜದ ಮುಖಂಡ ರಾಜೇಶ ಗೋವಿಂದ ತಾಂಡೇಲ ಅವರು ಸ್ಥಳೀಯ ಅರಣ್ಯ ವಲಯಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.
ಗೋಹತ್ಯೆ ವಿಷಯದಲ್ಲಿ ಜನರನ್ನು ಭಾವಾನಾತ್ಮಕವಾಗಿ ಪ್ರಚೋದಿಸಿ ಧರ್ಮ ಸಂಘರ್ಷ ಹುಟ್ಟು ಹಾಕುವ ಬಿಜೆಪಿ ಕಾಸರಕೋಡಿನ ಟೊಂಕದಲ್ಲಿ ಭಗವಾನ್ ಶ್ರೀ ವಿಷ್ಣುವಿನ ಅವತಾರವಾದ ಕಡಲಾಮೆಗಳ ಮಾರಣಹೋಮಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.



