ಚಿಕ್ಕಮಗಳೂರುಜಿಲ್ಲಾ ಸುದ್ದಿ
Blue Kurunji: ಹಸಿರು ಬೆಟ್ಟಗಳ ನಡುವೆ ಕಂಗೊಳಿಸುತ್ತಿರುವ ನೀಲಿ ಕುರುಂಜಿ ಹೂಗಳು

ಚಿಕ್ಕಮಗಳೂರು: ಹಸಿರಿನಿಂದ ಕಂಗೊಳಿಸುವ ಗಿರಿಶ್ರೇಣಿಗಳಲ್ಲಿ ಈಗ ನೀಲಿ ಕುರುಂಜಿ ಹೂವುಗಳು ಮಲೆನಾಡಿನ ಸೌಂದರ್ಯವನ್ನು ಹೆಚ್ಚಿಸಿದ್ದು, ಪ್ರವಾಸಿಗರ ಕಣ್ಮನ ಸೆಳೆಯತೊಡಗಿವೆ.
ಕುರಿಂಜಿ ಹೂ ಹನ್ನೆರಡು ವರ್ಷಕ್ಕೊಮ್ಮೆ ಅರಳುತ್ತವೆ. ಮುಳ್ಳಯ್ಯನಗಿರಿಗೆ ಹೋಗುವ ಕಡಿದಾದ ತಿರುವುಳ್ಳ ರಸ್ತೆಯ ಸೀತಾಳಯ್ಯನಗಿರಿ ಭಾಗದಲ್ಲಿ ಕುರುಂಜಿ ಹೂಗಳು ಅರಳಿದ್ದು, ಒಂದು ತಿಂಗಳ ಕಾಲ ಈ ಹೂವು ಅರಳಿ ನಿಂತಿರುತ್ತವೆ
ಮಳೆ, ಗಾಳಿ, ನೀರು, ಬೆಳಕು ಎಲ್ಲವೂ ಬೇಕಾದ ಈ ಸಸ್ಯಕ್ಕೆ ಪ್ರಕೃತಿ ಸಮತೋಲನ ಸ್ಥಿತಿಯಲ್ಲಿದ್ದಾಗ ಮಾತ್ರ ಹೂ ಅರಳುತ್ತವೆ. ಗಿರಿಗಳ ಮೇಲೆ ಕುರುಂಜಿ ಗಿಡಗಳು ಹುಲುಸಾಗಿ ಬೆಳೆಯುತ್ತವೆ. ಕೆಲ ರೈತರ ತೋಟಗಳಲ್ಲೂ ಕಾಣಿಸಿಕೊಳ್ಳುವ ಇವು ಹೆಚ್ಚು ಮಳೆಯಾಗುವ ಪ್ರದೇಶದ ಕೆಲವು ಕಾಫಿ ಏಲಕ್ಕಿ ತೋಟಗಳಲ್ಲಿ ಅರಳುತ್ತವೆ. ಕುರಿಂಜಿ ಗಿಡಗಳು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತವೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳು ಇರುವುದರಿಂದ ವಿವಿಧ ಖಾಯಿಲೆಗಳಿಗೆ ರಾಮಬಾಣವೂ ಆಗಿದೆ.




