ರಾಮನಗರ

ಚನ್ನಪಟ್ಟಣದಲ್ಲಿ ಆನೆಗಳ ಉಪಟಳ; ಆನೆ ವಲಯದಿಂದ ವರ್ಗಾವಣೆಗೊಳ್ಳುತ್ತಿರುವ ಸಿಬ್ಬಂದಿ

ರಾಮನಗರ: ಚನ್ನಪಟ್ಟಣ ತಾಲ್ಲೂನಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿತ್ಯವೂ ಒಂದೊಂದು ದಿಕ್ಕಿನಿಂದ ನಾಡಿಗೆ ನುಗ್ಗುತ್ತಿವೆ.

ಆನೆಗಳ ಹಾವಳಿಯಿಂದ ರೈತರ ಬೆಳೆ ಮತ್ತು ಪ್ರಾಣದ ಜೊತೆಗೆ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರೂ ಜೀವ ಭಯದಿಂದ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚನ್ನಪಟ್ಟಣ ನಗರದ ಅಪ್ಪಗೆರೆ, ಗ್ರಾಮೀಣ ಭಾಗದ ನೀಲಕಂಠನಹಳ್ಳಿ, ಗೋವಿಂದೇಗೌಡನದೊಡ್ಡಿ ಮೂಲಕ ಮುಂಜಾನೆ ಎರಡು ಆನೆಗಳು ಹಾದು ಹೋಗಿದ್ದು, ಸಿಕ್ಕ ಫಸಲುಗಳನ್ನು ತಿಂದ್ದಿಲ್ಲದೆ, ತುಳಿದು ನಾಶ ಪಡಿಸಿವೆ. ಕೂಡ್ಲೂರು ಕೆರೆಯ ಅಂಚಿನಲ್ಲಿ ಹಾದು ಹೋಗಿ ವಾಲೇತೋಪು ಗ್ರಾಮದ ತೋಟ ಒಂದರಲ್ಲಿ ಬೀಡು ಬಿಟ್ಟಿವೆ.

ನಗರದ ಮಂದಿ ಮುಂಜಾನೆ ನಾಲ್ಕು ಗಂಟೆಯಿಂದಲೇ ಈ ರಸ್ತೆಗಳಲ್ಲಿ ವಾಯು ವಿಹಾರಕ್ಕೆ ತೆರಳುತ್ತಿದ್ದು, ಇವರ ಜೊತೆಗೆ ಕೆಲಸಕ್ಕಾಗಿ ಓಡಾಡುವಂತಹ ಪ್ರಯಾಣಿಕರೂ ಸಹ ಆತಂಕ ಪಡುವಂತಾಗಿದೆ.

ಅರಣ್ಯ ಅಧಿಕಾರಿಗಳು ದೂರು ಬಂದ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಿ, ಆನೆಗಳನ್ನು ನೆಲೆನಿಂತ ಜಾಗದಿಂದ ದೂರ ಓಡಿಸಲಷ್ಟೇ ಸೀಮಿತವಾಗುತ್ತಿದ್ದಾರೆ. ಶಾಶ್ವತವಾಗಿ ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳು ಬಾರದಂತೆ ಖೆಡ್ಡಾವನ್ನು ನಿರ್ಮಿಸುವುದನ್ನು ಬಿಟ್ಟು, ನಾಡಿಗೆ ಬಂದ ನಂತರ ಓಡಿಸುವ ನೆಪವನ್ನಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ ಎನ್ನುವ ಆರೋಪ ಸಾರ್ವತ್ರಿಕವಾಗಿದೆ.

ಆನೆ ಓಡಿಸುವವರೇ ಇಲ್ಲ:

ಈ ಹಿಂದೆ ಆನೆಗಳು ಈ ಮಟ್ಟಿಗೆ ರೈತರ ತಾಕುಗಳಿಗೆ ದಾಂಗುಡಿ ಇಡದಿದ್ದರೂ, ಆನೆಗಳು ನಾಡಿನತ್ತ ಬರುತ್ತಿವೆ ಅಥವಾ ಬಂದಿವೆ ಎನ್ನುವುದನ್ನು ತಿಳಿದುಕೊಂಡ ನುರಿತ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಚಲನವಲನವನ್ನು ನಿತ್ಯವು ಗಮನಿಸಿ, ಅವುಗಳು ನಾಡಿನತ್ತ ಸುಳಿಯದಂತೆ ಕಾಣ್ಗಾವಲಿಡುತ್ತಿದ್ದರು. ಆದರೇ ಇಂದು ಅಂತ ಪರಿಸ್ಥಿತಿ ಇಲ್ಲವೆನ್ನುವ ಮಾತುಗಳು ಸಾರ್ವಜನಿಕರಲ್ಲದೇ, ಸ್ವತಃ ಅರಣ್ಯ ಇಲಾಖೆಯ ಹಿರಿಯ ಸಿಬ್ಬಂದಿಯಿಂದಲೂ ಕೇಳಿಬರುತ್ತಿದೆ.

ಇನ್ನು ಆನೆಗಳ ಉಪಟಳ ಹೆಚ್ಚಳ, ರೈತರ ಬೆಳೆ ನಷ್ಟ ಮತ್ತು ರೈತರ ಆಕ್ರೋಶಕ್ಕೆ ತುತ್ತಾಗುವ ಕಾರಣಕ್ಕೆ ಅರಣ್ಯ ಇಲಾಖೆ ವಾಚರ್ ಗಳಿಂದ ಹಿಡಿದು ಸಹಾಯಕ ವಲಯ ಅರಣ್ಯಾಧಿಕಾರಿಗಳ ವರೆಗೆ ಎಲ್ಲರೂ ವರ್ಗಾವಣೆ ಮಾಡಿಸಿಕೊಂಡು ಆನೆ ಸಹವಾಸದಿಂದ ಮುಕ್ತಿ ಪಡೆದುಕೊಳ್ಳುತ್ತಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ತೆಂಗಿನಕಲ್ಲು ವಲಯ ಅರಣ್ಯ ವ್ಯಾಪ್ತಿಯಲ್ಲಿ ಒಂದಿಬ್ಬರು ಕಳೆದ ತಿಂಗಳಷ್ಟೇ ಸಾಮಾಜಿಕ ಅರಣ್ಯ ಮತ್ತು ಬೆಂಗಳೂರಿಗೆ ವರ್ಗಾವಣೆ ಗೊಂಡಿರುವುದು.

ದಿನನಿತ್ಯ ಆನೆಗಳ ಹಾವಳಿ ಹೆಚ್ಚುತ್ತಿದ್ದರೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇಲಾಖೆಯಲ್ಲಿ ಸಿಬ್ಬಂದಿ ಸಾಕಷ್ಟು ಕೊರತೆಯ ನೆಪವೊಡ್ಡಿಯಾದರು ವರ್ಗಾವಣೆಗೆ ಬ್ರೇಕ್ ಹಾಕಬೇಕಿತ್ತು. ಆದ್ರೆ ಆನೆಗಳ ರಕ್ಷಣೆ, ರೈತರ ಬೆಳೆ ಪ್ರಾಣಗಳ ರಕ್ಷಣೆಗೆ ಮುಂದಾಗಿಲ್ಲವೆನ್ನುವ ಆರೋಪಗಳು ಕೇಳಿಬರುತ್ತಿವೆ.

ಇತ್ತೀಚಿಗೆ ಜಮೀನಿನಲ್ಲಿ ಇದ್ದ ಬೆಳೆಯನ್ನು ರಕ್ಷಿಸಲು ರೈತನೋರ್ವ ತಂತಿ ಬೇಲಿ ನಿರ್ಮಿಸಿ ವಿದ್ಯುತ್ ಹರಿಸಿದ್ದ ರಿಂದ ಒಂದು ಸಲಗ ಸಾವನ್ನಪ್ಪಿತ್ತು. ಹಾಗೂ ಒಂದು ಚಿರತೆ ಬೇಟೆಗಾರರನ ಗುಂಡೇಟಿಗೆ ಬಲಿಯಾಗಿತ್ತು ಮತ್ತೊಂದು ಚಿರತೆ ಮತ್ತು ಆನೆ ಅನುಮಾನಾಸ್ಪದವಾಗಿ ಸತ್ತುಬಿದ್ದಿತ್ತು.

ಇದರಿಂದ ಪ್ರಾಣಿಗಳಿಗೂ ಮನುಷ್ಯರಿಂದ ಅವಘಡ ತಪ್ಪಿದ್ದಲ್ಲ ಎಂದು ಸಾಬೀತಾಗಿದ್ದು, ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಗೊಳ್ಳಬೇಕು. ಇಲ್ಲವಾದಲ್ಲಿ ಮನುಷ್ಯರು ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಉಲ್ಭಣಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button