ರಾಮನಗರ ಕಾಂಗ್ರೆಸ್ ಬಣ ರಾಜಕೀಯ; ಡಿಕೆ ಶಿವಕುಮಾರ್ ಮಧ್ಯಪ್ರವೇಶ ಸಾಧ್ಯತೆ

ರಾಜೇಶ್ ಕೊಂಡಾಪುರ
ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಪಕ್ಷದೊಳಗೆ ತಾರಕಕ್ಕೇರಿರುವ ಬಣ ರಾಜಕೀಯದ ಗುದ್ದಾಟದ ಚೆಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಂಗಳ ಪ್ರವೇಶಿಸಿದೆ.
ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ರವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ ಕಾಂಗ್ರೆಸ್ ಅಭ್ಯರ್ಥಿ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಸಂಸದ ಡಿ.ಕೆ.ಸುರೇಶ್ ರವರು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಅವರೇ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ಎಂದು ಪ್ರತಿಪಾದಿಸಿ ವಿರೋಧಿ ಬಣಕ್ಕೆ ಟಾಂಗ್ ನೀಡಿದ್ದರು.
ಈ ಹೇಳಿಕೆಗಳು ಪಕ್ಷದೊಳಗೆ ಸಂಚಲನ ಸೃಷ್ಟಿಸಿತಲ್ಲದೆ ಕಾರ್ಯಕರ್ತರಲ್ಲಿಯೂ ಅಭ್ಯರ್ಥಿ ವಿಚಾರವಾಗಿ ಗೊಂದಲ ಮೂಡುವಂತೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಕ್ಬಾಲ್ ಅವರೇ ಅಭ್ಯರ್ಥಿ ಆಗಬೇಕೆಂಬ ಸಂದೇಶಗಳು ಹರಿದಾಡುತ್ತಿವೆ.
ಇಕ್ಬಾಲ್ ಹುಸೇನ್ ವಿರುದ್ಧ ರಚನೆಯಾಗಿರುವ ಹಿರಿಯ ನಾಯಕರ ಮಿತ್ರ ಮಂಡಳಿಯ ಬಣ ರಾಜಕೀಯ ಸ್ವ ಪಕ್ಷದಲ್ಲಿಯೇ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೂ ಬಂದಿದೆ. ಬಣ ರಾಜಕೀಯ ಉಲ್ಬಣಗೊಳ್ಳುವುದನ್ನು ತಡೆಯುವ ಸಲುವಾಗಿ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲಿಯೇ ವಿರೋಧಿ ಬಣ ನಾಯಕರೊಂದಿಗೆ ಸಂಧಾನ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ , ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ ಹಾಗೂ ಕಾಂಗ್ರೆಸ್ ನ ಸಂಭವನೀಯ ಅಭ್ಯರ್ಥಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಹಾಗೂ ಟಿಕೆಟ್ ಆಕಾಂಕ್ಷಿತರು ಸೇರಿದಂತೆ ಪ್ರಮುಖರು ಭಾಗಿಯಾಗುವ ಸಾಧ್ಯತೆಗಳಿವೆ.
ಸ್ಪೋಟಗೊಳ್ಳುವುದೇ ಉಪ ಚುನಾವಣೆ ರಹಸ್ಯ?:
ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮತ್ತು ಡಿ.ಕೆ.ಶಿವಕುಮಾರ್ ಸ್ನೇಹ ಚೆನ್ನಾಗಿದೆ. ಆದರೆ, ಸಂಸದ ಡಿ.ಕೆ.ಸುರೇಶ್ ಅವರೊಂದಿಗಿನ ಸಂಬಂಧ ಮೊದಲಿನಿಂದಲೂ ಅಷ್ಟಕಷ್ಟೆ. ಇದಕ್ಕೆ 2018ರ ನವೆಂಬರ್ ನಲ್ಲಿ ನಡೆದ ರಾಮನಗರ ಕ್ಷೇತ್ರ ಉಪಚುನಾವಣೆಯಲ್ಲಿನ ಬೆಳವಣಿಗೆಗಳು ಇಬ್ಬರ ನಡುವಿನ ಬಾಂಧವ್ಯಕ್ಕೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿತು.
ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಕಾರದಲ್ಲಿದ್ದ ಕಾರಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಮೈತ್ರಿ ಧರ್ಮ ಪಾಲನೆ ಮಾಡಿತು. ಆಗ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿಯಿಂದ ಸಿ.ಎಂ.ಲಿಂಗಪ್ಪರವರ ಪುತ್ರ ಎಲ್.ಚಂದ್ರಶೇಖರ್ ಅಭ್ಯರ್ಥಿಯಾದರು.
ಮತದಾನಕ್ಕೆ ಎರಡು ದಿನ ಬಾಕಿ ಇರುವಂತೆಯೇ ಚಂದ್ರಶೇಖರ್ ರವರು ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಸೇರಿ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದರು. ಇದು ಚುನಾವಣೆ ಗೆಲ್ಲಲು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ರೂಪಿಸಿದ ರಣತಂತ್ರದ ಒಂದು ಭಾಗ ಎಂದೆಲ್ಲ ಚರ್ಚೆಗಳು ನಡೆದಿದ್ದವು.
ಆದರೆ, ಈ ಎಲ್ಲಾ ಬೆಳವಣಿಗೆಗಳು ಮಗನ ರಾಜಕೀಯ ಭವಿಷ್ಯದ ಬಗ್ಗೆ ಕನಸು ಕಂಡಿದ್ದ ಸಿ.ಎಂ.ಲಿಂಗಪ್ಪ ಅವರ ಮನಸ್ಸಿಗೆ ಘಾಸಿಗೊಳಿಸಿತು. ಚುನಾವಣೆಯಲ್ಲಿ ಪುತ್ರ ದುರಂತ ನಾಯಕನ ಪಾತ್ರ ನಿರ್ವಹಿಸಿದ್ದಕ್ಕೆ ಸ್ವತಃ ಲಿಂಗಪ್ಪ ಅವರೇ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರಲ್ಲಿ ಬಹಿರಂಗವಾಗಿ ಕ್ಷಮೆಯಾಚನೆ ಮಾಡಿ ಕಣ್ಣೀರಿಟ್ಟಿದ್ದರು.
ಜತೆಗೆ ಸಂಸದ ಡಿ.ಕೆ.ಸುರೇಶ್ ನಡವಳಿಕೆ ವಿರುದ್ಧ ಅವರೊಬ್ಬರೇ ಕಾಂಗ್ರೆಸ್ ನಲ್ಲಿ ಸರ್ವಾಧಿಕಾರಿ ಅಲ್ಲ. ನಾನು ಅನ್ನುವ ಅಹಂ ಮತ್ತು ದುರಹಂಕಾರವನ್ನು ಬಿಡಬೇಕು ಎಂದು ವಾಗ್ದಾಳಿ ಕೂಡ ನಡೆಸಿದ್ದರು. ತಂದೆ ಲಿಂಗಪ್ಪರವರ ವಿರೋಧ ಕಟ್ಟಿಕೊಂಡು ಚಂದ್ರಶೇಖರ್ ಏಕೆ ಬಿಜೆಪಿ ಸೇರ್ಪಡೆಯಾದರು, ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಪ್ರೇರೇಪಿಸಿ ಕರೆದುಕೊಂಡು ಹೋದವರು ಯಾರು, ಎಲ್ಲಿಗೆ ಕರೆದೊಯ್ದಿದ್ದರು ಎಂಬುದೆಲ್ಲ ಇನ್ನೂ ರಹಸ್ಯವಾಗಿಯೇ ಉಳಿದಿದೆ.
ಈಗ ಕಾಂಗ್ರೆಸ್ ಅಭ್ಯರ್ಥಿ ವಿಚಾರ ಡಿ.ಕೆ.ಸುರೇಶ್ ಹಾಗೂ ಸಿ.ಎಂ.ಲಿಂಗಪ್ಪ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಇದು ಹೀಗೆಯೇ ಮುಂದುವರೆದರೆ ಉಪ ಚುನಾವಣೆಯ ರಹಸ್ಯ ಸ್ಪೋಟಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿದೆ.




