ರಾಮನಗರ

ಅರಣ್ಯದ ಹಸಿರು ನುಂಗುತ್ತಿರುವ ಕೈಗಾರಿಕಾ ತ್ಯಾಜ್ಯ; ಪರಿಸರ ಇಲಾಖೆ ಮೌನ

ರಾಜೇಶ್ ಕೊಂಡಾಪುರ

ರಾಮನಗರ: ವನ್ಯಜೀವಿ ವಲಯದಲ್ಲಿ ಮೆಡಿವೇಸ್ಟ್ ಸುರಿಯಲಾಗಿದ್ದು, ಸುತ್ತಲಿನ ಒಂದು ಕಿ.ಮೀ ಪ್ರದೇಶದಲ್ಲಿನ ಕಾಡು ಒಣಗಿ, ಮರಗಳೆಲ್ಲವು ಸುಟ್ಟು ಕರಕಲಾಗಿವೆ ! ಹೀಗಿದ್ದರೂ, ಪರಿಸರ ಇಲಾಖೆ ಮಾತ್ರ ನನಗು ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ.

ಅರಣ್ಯದೊಳಗೆ ಕಾರ್ಖಾನೆಗಳ ತ್ಯಾಜ್ಯ ಸುರಿಯುತ್ತಿರುವುದು ಹೊಸದೇನೂ ಅಲ್ಲ. ಆದರೆ, ಮೆಡಿವೇಸ್ಟ್‌ಗಳಿಂದಾಗಿ ಅರಣ್ಯ ಪ್ರದೇಶ ಮಾತ್ರವಲ್ಲ ಅಲ್ಲಿರುವ ವನ್ಯಜೀವಿಗಳು ತತ್ತರಿಸುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಯು ತಲೆಕೆಡಿಸಿಕೊಂಡಿಲ್ಲ. ನಿತ್ಯ ಟ್ರ್ಯಾಕ್ಟರ್‌ಗಟ್ಟಲೆ ಮೆಡಿವೇಸ್ಟ್‌ಗಳನ್ನು ಸುರಿಯಲಾಗುತ್ತಿದ್ದು, ಸಂಜೆಯೊಳಗೆ ರಾಸಾಯನಿಕ ಕ್ರಿಯೆ ನಡೆದು, ಇದ್ದಲ್ಲಿಯೇ ಸುಟ್ಟು ಹೋಗುತ್ತಿದೆ. ಇದರಿಂದಾಗಿ ಸುತ್ತಲಿನ 1 ಕಿ.ಮೀ ಅರಣ್ಯ ಪ್ರದೇಶ ಬಂಜರು ಭೂಮಿಯಾಗಿ ಮಾರ್ಪಟ್ಟಿದೆ.

ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯಲ್ಲಿನ ತಟ್ಟೆಕೆರೆ ಅರಣ್ಯ ಪ್ರದೇಶಗಳಲ್ಲಿ ಮೆಡಿವೇಸ್ಟ್‌ಗಳನ್ನು ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಮೆಡಿಕಲ್ ವೇಸ್ಟ್‌ಗಳನ್ನು ಬಿಸಾಡಲಾಗಿದೆ. ಆದರೆ, ಇಲ್ಲಿ 500 ಮೀಟರ್‌ಗೊಂದರಂತೆ ಗುಡ್ಡೆ ಮಾಡಿ, ಮೆಡಿವೇಸ್ಟ್‌ಗಳನ್ನು ಸುರಿಯಲಾಗುತ್ತಿರುವುದು ವಿರ್ಪಯಾಸ.

ಹಾರೋಹಳ್ಳಿ ವನ್ಯಜೀವಿ ವಲಯ ಮುಕ್ತಯಾಗೊಳ್ಳುತ್ತಿದ್ದಂತೆ ಶುರುವಾಗುವ ಆನೇಕಲ್ ವನ್ಯಜೀವಿ ವಲಯದಲ್ಲೇ ಮೆಡಿವೇಸ್ಟ್ ಗಳನ್ನು ಸುರಿಯಲಾಗಿದೆ. ಇದರಿಂದ ಸುಮಾರು ೨ ಕಿ.ಮಿ ಅಂತರದಲ್ಲಿ ಊರುಗನದೊಡ್ಡಿ ಗ್ರಾಮವು ಇದೆ. ಇನ್ನು ಹಾರೋಹಳ್ಳಿ ಕೈಗಾರಿಕಾ ಪ್ರದೇಶವು ಸನ್ನಿಹದಲ್ಲೇ ಇರುವುದರಿಂದಲ್ಲೇ ಅಲ್ಲಿರುವ ಕಾರ್ಖನೆಗಳಿಂದ ಮೆಡಿವೇಸ್ಟ್‌ಗಳನ್ನು ಅರಣ್ಯದೊಳಗೆ ಸುರಿಯಲಾಗುತ್ತಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಮೈಸೂರಿನ ಕೈಗಾರಿಕೆಗಳಿಂದ ಸೃಷ್ಟಿಯಾಗುವ ಮೆಡಿವೇಸ್ಟ್‌ಗಳನ್ನು ಇಲ್ಲಿಗೆ ತಂದು ಸುರಿಯಲಾಗುತ್ತಿದೆ ಎಂಬ ಆರೋಪವು ಇದೆ.

ಪರಿಣಾಮವೇನು?:

ಮೆಡಿವೇಸ್ಟ್‌ಗಳಿಂದಾಗಿ ರಾಸಾಯನಿಕ ಕ್ರಿಯೆ ನಡೆದು, ಸುತ್ತಲಿನ ಒಂದು ಕಿ.ಮೀ ಪ್ರದೇಶ ಬಂಜರು ಭೂಮಿಯಾಗಿ ಪರಿಣಮಿಸಿದೆ. ಕೆಲ ಮೆಡಿವೇಸ್ಟ್‌ಗಳಿಗೆ ಬೆಂಕಿ ಇಡಲಾಗಿದೆ. ಇದರಿಂದಾಗಿ ವಾಯು ಮಾಲಿನ್ಯ ಉಂಟಾಗುವುದು ಮಾತ್ರವಲ್ಲ, ಈ ಗಾಳಿಯನ್ನು ಸೇವಿಸಿದವರಿಗೆ ಉಸಿರಾಟದ ಸಮಸ್ಯೆ, ಗಂಭೀರ ಕಾಯಿಲೆಗಳು ಕಾಡುವುದರಲ್ಲಿ ಎರಡು ಮಾತಿಲ್ಲ. ಮೆಡಿವೇಸ್ಟ್ ಸುರಿದಿರುವ ಪಕ್ಕದಲ್ಲಿನ ಬಿದಿರೆಲ್ಲವು ಸುಟ್ಟು ಕರಕಲಾಗಿವೆ. ತಡೆಯಲು ಸಾಧ್ಯವಾಗದಷ್ಟು ದುರ್ನಾಥವು ವನ್ಯಜೀವಿಗಳ ಮೇಲೆ ಪರಿಣಾಮ ಬೀರಿದೆ.

ಇದೇ ಸ್ಥಳದಲ್ಲೆ ಅವಧಿ ಪೂರ್ಣಗೊಂಡಿರುವ ಮಾತ್ರೆಗಳು, ಕೆಮಿಕಲ್ ಬಾಟಲಿಗಳು, ಔಷಧಿಗಳು, ಸರ್ಜಿಕಲ್ ನೈಫ್, ಕತ್ತರಿ, ಗ್ಲೌಸ್, ಮಾನವನ ದೇಹದಲ್ಲಿನ ಅನೇಕ ವಸ್ತುಗಳು ಪತ್ತೆಯಾಗಿವೆ. ಇನ್ನಾದರೂ, ಈ ಬಗ್ಗೆ ಪರಿಸರ ಇಲಾಖೆ, ಅರಣ್ಯ ಇಲಾಖೆ ನಿಗಾ ವಹಿಸಬೇಕಿದೆ.

ವೃಷಭಾವತಿ ಮಲೀನ

ಬೆಂಗಳೂರಿನಿಂದ ರಾಮನಗರದ ಬಿಡದಿ ವರೆಗು ಹರಿಯಲಿರುವ ವೃಷಭಾವತಿ ನದಿ ಪಾತ್ರವಲ್ಲಿ ಬರೊಬ್ಬರಿ ೩,೩೩೪ ಕಾರ್ಖಾನೆಗಳಿವೆ. ಇದರಲ್ಲಿ ೧೩೯೬ ಕಾರ್ಖನೆಗಳು ಅನುಮತಿಯನ್ನೇ ಪಡೆದಿಲ್ಲ. ಈ ಪೈಕಿ ೨೪೧ ಕಾರ್ಖನೆಗಳಿಗೆ ಶಾಶ್ವತವಾಗಿ ಬೀಗ ಜಡಿಯಲಾಗಿದ್ದು, ಇನ್ನುಳಿದವುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಖುದ್ದು ಪರಿಸರ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್ ಒಪ್ಪಿಕೊಂಡಿದ್ದರು. ಈ ಕೈಗಾರಿಕೆಗಳಿಂದಾಗಿ ವೃಷಭಾವತಿ ನದಿ ಸಂಪೂರ್ಣ ಕಲುಷಿತಗೊಂಡಿದ್ದು, ಮೂರು ಹಂತದ ಶುದ್ಧಿಕರಣದ ಅಗತ್ಯವು ಇದೆ. ಈಗಾಗಲೇ ಕೈಗಾರಿಕೆಗಳ ತ್ಯಾಜ್ಯದಿಂದ ನದಿ ಪಾತ್ರಗಳು ಮಲೀನಗೊಂಡಿದೆ.
ಈಗ ಅರಣ್ಯ ಪ್ರದೇಶಕ್ಕೂ ವಿಸ್ತರಣೆಗೊಂಡಿರುವ ಕೈಗಾರಿಕೆಗಳ ತ್ಯಾಜ್ಯಕ್ಕೆ ಬ್ರೇಕ್ ಹಾಕದಿದ್ದಲ್ಲಿ, ಮಾನವ ಹಾಗು ವನ್ಯಜೀವಿಗಳ ಸಂಘರ್ಷ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನನಗೆ ಜಾಗ ತೋರಿಸಿದರೆ, ಬಂದು, ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಾರೆ ಜಿಲ್ಲಾ ಪರಿಸರ ಅಧಿಕಾರಿ ವಾಸುದೇವ್.

Spread the love

Related Articles

Leave a Reply

Your email address will not be published. Required fields are marked *

Back to top button