ರಾಮನಗರ: ಜನತೆಗೆ ಒದಗದ ಬಾಪೂಜಿ ಸೇವಾ ಕೇಂದ್ರಗಳು

ರಾಜೇಶ್ ಕೊಂಡಾಪುರ
ರಾಮನಗರ: ಸ್ಥಳೀಯವಾಗಿ ಗ್ರಾಮೀಣ ಜನರಿಗೆ ಸೇವೆಗಳು ಸಿಗಲೆಂದು ಗ್ರಾಮ ಪಂಚಾಯಿತಿಗಳಲ್ಲಿ ಸರಕಾರ ಸೇವಾ ಕೇಂದ್ರ ತೆರೆದಿದೆ. ಆದರೇ ರಾಮನಗರ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಪಂಚಾತಿಗಳನ್ನು ಹೊರತುಪಡಿಸಿ, ಉಳಿದವು ನಿಷ್ಕ್ರಿಯವಾಗಿವೆ. ಇದರಿಂದ ಜನತೆ ಪಡಿಪಾಟಲು ಪಡುವಂತಾಗಿದೆ.
ಬಾಪೂಜಿ ಸೇವಾ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ 43 ಸೇವೆಗಳು, ಕಂದಾಯ ಇಲಾಖೆಯ 40 ಹಾಗೂ ಇತರೆ 17 ವಾಣಿಜ್ಯ ಸೇವೆಗಳು ಸೇರಿದಂತೆ ಒಟ್ಟು 100 ಸರಕಾರಿ ಸೌಲಭ್ಯಗಳು ಗ್ರಾಮೀಣ ಜನರಿಗೆ ದೊರಕುತ್ತವೆ.
ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯತನ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಸೇವಾ ಸೌಲಭ್ಯಗಳು ಜಿಲೆಯ ಬಹುತೇಕ ಪಂಚಾಯಿತಿಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಲಭ್ಯವಾಗುತ್ತಿಲ್ಲ.
”ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ, ಕೃಷಿ ಕಾರ್ಮಿಕ ದೃಢೀಕರಣ ಪತ್ರ, ಆಧಾರ್ ತಿದ್ದುಪಡಿ, ಜಮೀನಿನ ಪಹಣಿ ಪತ್ರಗಳ ವಿತರಣೆ ಸೇರಿದಂತೆ ಮುಂತಾದ ಅಗತ್ಯ ದಾಖಲೆ ಪತ್ರಗಳನ್ನು ಗ್ರಾಮ ಪಂಚಾಯಿತಿಗಳಲ್ಲಿಯೇ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿ ನಿರಾಸಕ್ತಿಯಿಂದ ಗ್ರಾಮೀಣ ಭಾಗದ ಜನರು ಕೆಲಸ ಕಾರ್ಯ ಬಿಟ್ಟು ನಾಡ ಕಚೇರಿ ಮತ್ತು ತಾಲೂಕು ತಹಸೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ.
ಅದರೂ ಜಿಲ್ಲಾ ಪಂಚಾಯತಿ ಹಿರಿಯ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾರ್ಗ ಸೂಚನೆಯಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಅಥವಾ ಆದೇಶ ನೀಡದೆ ಅವರು ಕೂಡ ಮೌನಕ್ಕೆ ಶರಣಾಗಿದ್ದಾರೆ. ಇದರಿಂದ ಬಾಪೂಜಿ ಸೇವಾ ಕೇಂದ್ರಕ್ಕೆಂದು ಪಂಚಾಯಿತಿಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೇ ಇಲ್ಲಿ ಗ್ರಾಮೀಣ ಜನತೆಗೆ ಸಿಗುವ ಸೌಲಭ್ಯ ಮತ್ತು ದಾಖಲೆಗಳ ಮಾಹಿತಿ ಫಲಕವನ್ನೇ ತೆಗೆದು ಹಾಕಿ, ಜನತೆಗೆ ಸಿಗುವ ಸೌಲಭ್ಯವನ್ನೇ ಮರೆಮಾಚಲಾಗಿದೆ.
ಪಂಚಾಯಿತಿಗಳಲ್ಲಿ ಸೇವೆಗಳನ್ನು ನೀಡಲು ತೊಡಕಾಗುವುದಾದರೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಏಕೆ ಬಾಪೂಜಿ ಸೇವಾ ಕೇಂದ್ರವನ್ನು ಅನುಷ್ಠಾನಗೊಳಿಸಬೇಕಿತ್ತು ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.
———–
“ಆಧಾರ್ ತಿದ್ದುಪಡಿ, ಪಹಣಿ ವಿತರಣೆಯಂತಹ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಬಗೆಹರಿಸಬೇಕು. ಬಾಪೂಜಿ ಸೇವಾ ಕೇಂದ್ರದಲ್ಲಿ ದೊರೆಯುವ ಸೇವಾ ಸೌಲಭ್ಯಗಳ ಮಾಹಿತಿ ಫಲಕಗಳನ್ನು ಎಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು.”
-ಕೆ.ಪಿ. ಪ್ರವೀಣ್ ಕುಮಾರ್,
ಕೋಡಂಬಳ್ಳಿ ಗ್ರಾ.ಪಂ. ಸದಸ್ಯ




