ಅರಣ್ಯ ಒತ್ತುವರಿಗಿಲ್ಲ ಲಗಾಮು; ಭೂ ವಿಸ್ತರಣೆಗೆ ರಾತ್ರೋರಾತ್ರಿ ಜೆಸಿಬಿ ಅಬ್ಬರ!

ರಾಜೇಶ್ ಕೊಂಡಾಪುರ
ರಾಮನಗರ: ಕಣ್ವ ಸಮೀಪವಿರುವ ಅರಣ್ಯ ಇಲಾಖೆಯ ನೂರಾರು ಎಕರೆ ಭೂಮಿ ಭೂಗಳ್ಳರ ಹಾವಳಿಯಿಂದಾಗಿ ನಲುಗುತ್ತಿದೆ.
ಹೌದು, ಚನ್ನಪಟ್ಟಣದ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿತ್ಯ ದಾಖಲಾಗುವ ಭೂ ವ್ಯಾಜ್ಯ ಇದಕ್ಕೆ ಸ್ಪಷ್ಟ ನಿದರ್ಶನ. ಕಣ್ವ ಅರಣ್ಯದ ಬದಿಯಲ್ಲಿರುವ ಕನ್ನಮಂಗಲ ಸರ್ವೆ ನಂಬರ್ 149ರಲ್ಲಿ 250 ಎಕರೆ ಸರಕಾರಿ ಗೋಮಾಳ ಇದೆ. ಇದರಲ್ಲಿ ನೂರು ಎಕರೆಯಷ್ಟು ಪ್ರದೇಶ ಸಾಗುವಳಿ ಪತ್ರ ಅನ್ನದಾತರ ಕೈ ಸೇರಿದೆ. ಇನ್ನೊಂದಷ್ಟು ಪ್ರದೇಶದಲ್ಲಿ ಉಳುಮೆ ನಡೆಯುತ್ತಿದ್ದು, ಸಾಗುವಳಿ ಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ. ಇದರ ನಡುವೆಯೇ ಈ ಕಂದಾಯ ಭೂಮಿಯ ಪಕ್ಕದಲ್ಲೇ ಇರುವ ಅರಣ್ಯ ಇಲಾಖೆಯ ನೂರಾರು ಎಕರೆ ಭೂಮಿ ಒತ್ತುವರಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ವಿಸ್ತೀರ್ಣಗೊಳ್ಳುತ್ತಲೇ ಇದೆ:

ಕಂದಾಯ ಇಲಾಖೆಗೆ ಸೇರಿದ ಗೋಮಾಳ ಪ್ರದೇಶದ ಸನ್ನಿಹದಲ್ಲೇ ಅರಣ್ಯ ಇಲಾಖೆಗೆ ಸೇರಿದ ಜಾಗವಿರುವ ಹಿನ್ನಲೆಯಲ್ಲಿ ಕಂದಾಯ ಭೂಮಿಗೆ ಹೊಂದಿಕೊಂಡತೆಯೆ ಭೂಮಿ ವಿಸ್ತೀರ್ಣ ಹೆಚ್ಚಾಗುತ್ತಲೇ ಇದೆ. ಇನ್ನು ರಾತ್ರೋರಾತ್ರಿ ಜೆಸಿಬಿಗಳ ಮೂಲಕ ದೂರದ ಊರಿನವರು, ಬೆಂಗಳೂರಿನ ರಿಯಲ್ ಎಸ್ಟೇಟ್ ದಂಧೆ ನಡೆಸುವ ಮಂದಿ ಸಹ ಭೂಮಿಯನ್ನು ಒತ್ತುವರಿ ಮಾಡುತ್ತಲೇ ಇದ್ದಾರೆ.
ರಾತ್ರೋರಾತ್ರಿ ಒತ್ತುವರಿ ನಡೆಸಿ, ರಾಗಿ, ಜೋಳ ಚೆಲ್ಲುವುದು ಇಲ್ಲವೇ, ಮಾವಿನ ಸಸಿಗಳನ್ನು ನೆಟ್ಟು ನಮ್ಮದೇ ಈ ಜಾಗವೆಂದು ಎಗ್ಗಿಲ್ಲದೆ ಘೋಷಿಸಿಕೊಳ್ಳುತ್ತಿದ್ದಾರೆ.
ಇನ್ನು ಅಪರೂಪಕ್ಕೊಮ್ಮೆ ಸ್ಥಳ ಪರಿಶೀಲನೆ ನಡೆಸುವ ಅರಣ್ಯ ಇಲಾಖೆ, ಮಾವಿನ ಸಸಿಗಳನ್ನು ಕಿತ್ತು ಮನೆಗೆ ಬರುತ್ತಿದೆ. ಇದರಿಂದಾಗಿ ಊರಿನೊಳಗೆ ಭೂವ್ಯಾಜ್ಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಠಾಣೆಗೆ ನಿತ್ಯ ದೂರುಗಳ ಸರಮಾಲೆ:
ಒಂದಷ್ಟು ಮಂದಿಗೆ ಮಾತ್ರವೇ ಕಂದಾಯ ಇಲಾಖೆ ಸಾಗುವಳಿ ಪತ್ರ ನೀಡಿದೆ. ಇನ್ನುಳಿದವರಿಗೆ ಅಂತಿಮ ಹಂತದ ಸಿದ್ದಂತೆಯಲ್ಲಿ ತೊಡಗಿಸಿಕೊಂಡಿದೆ. ಇದರ ನಡುವೆಯೇ, ಭೂ ಒತ್ತುವರಿ ಪ್ರಕರಣ ಎಗ್ಗಿಲ್ಲದೇ ಸಾಗಿದೆ. ಈ ಊರಿನಲ್ಲಿ ನಿತ್ಯ ಗಲಾಟೆ ನಡೆಯುತ್ತಲೇ ಇದ್ದು, ದಿನಕ್ಕೆ ಕನಿಷ್ಟ ಒಂದು ಪ್ರಕರಣವಾದರೂ, ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಲೇ ಇರುತ್ತದೆ. ಇನ್ನು ಪೊಲೀಸರಂತು ನಿತ್ಯವೂ ರಾಜಿ ಮಾಡಿಸುವುದರಲ್ಲೇ ಕಾಲ ನೂಕುವಂತಾಗಿದೆ.
ನಿರ್ಜನ ಪ್ರದೇಶವಾದ ಇಲ್ಲಿ, ಪುಡಿ ರೌಡಿಗಳ ದಂಡು ಕಟ್ಟಿಕೊಂಡು ರಾತ್ರಿ ವೇಳೆ ಭೂ ಒತ್ತುವರಿ ನಡೆಸುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಕಂದಾಯ ಇಲಾಯು 2 ಎಕರೆ ಸಾಗುವಳಿ ಪತ್ರ ನೀಡಿದ್ದರೆ, ಕೆಲವರು ಹತ್ತು ಎಕರೆಯಷ್ಟು ಭೂಮಿ ಉಳುಮೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ, ಹೊರಗಡೆಯವರು ಸಹ ಒತ್ತುವರಿ ನಡೆಸುತ್ತಲೇ ಇದ್ದಾರೆ. ಅರಣ್ಯ ಇಲಾಖೆ ಅಪರೂಪಕ್ಕೊಮ್ಮೆ ಒತ್ತುವರಿ ಮೇಲೆ ಗುರುಗುಟ್ಟಿದ ವೇಳೆ, ಅಕ್ಕಪಕ್ಕದ ಒತ್ತುವರಿದಾರರು ಪೊಲೀಸ್ ಠಾಣೆ ಮೆಟ್ಟಿಲೇರುವುದು ಇಲ್ಲಿ ವಾಡಿಕೆಯಾಗಿಬಿಟ್ಟಿದೆ.
ಏನೂ ಮಾಡಲಾಗದ ಸ್ಥಿತಿ:
ಕಣ್ಣೆದುರೇ ಕಂದಾಯ ಇಲಾಖೆಯ ಭೂಮಿ ಒತ್ತುವರಿಯಾಗಿದ್ದರೂ, ಕಂದಾಯ ಇಲಾಖೆ ತನ್ನ ಆಸ್ತಿಯನ್ನು ರಕ್ಷಿಸಿಕೊಳ್ಳುವ ಕೆಲಸವನ್ನು ಮಾಡಲು ಮುಂದಾಗುತ್ತಿಲ್ಲ. ಅರಣ್ಯ ಇಲಾಖೆಯು ಅಷ್ಟೇ, ಮಾವಿನ ಗಿಡಗಳನ್ನು ಕಿತ್ತು ಬಿಸಾಡುತ್ತಿದೆ ಎನ್ನುವುದನ್ನು ಬಿಟ್ಟರೆ, ಒತ್ತುವರಿದಾರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನೆ ಲಾಭವಾಗಿಸಿಕೊಂಡ ಭೂಗಳ್ಳರು ನಿತ್ಯ ಅರಣ್ಯ ಭೂಮಿಯನ್ನು ಒತ್ತುವರಿ ಮಾಡುತ್ತಲೇ ಇದ್ದಾರೆ.
ಕನ್ನಮಂಗಲ ಪ್ರದೇಶದಲ್ಲಿ ರೈತರು ಉಳುಮೆ ಮಾಡುತ್ತಲೇ ಇರುತ್ತಾರೆ. ಇಲ್ಲಿ ಅರಣ್ಯ ಭೂಮಿ ಮೊದಲು ಸರ್ವೇಯಾಗಬೇಕು. ಒತ್ತುವರಿಯಾಗಿದ್ದರೆ, ಅದನ್ನು ಇಲಾಖೆ ಸುರ್ಪದಿಗೆ ಪಡೆಯಲಿದೆ. ಕಮಿಟಿ ಮುಂದೆ ನಿರ್ಣಯ ಕೈಗೊಳ್ಳಬೇಕು ಎನ್ನುತ್ತಾರೆ ಉಪವಿಭಾಗಧಿಕಾರಿ ಸಿ. ಮಂಜುನಾಥ್
ನಮ್ಮ ಸಿಬ್ಬಂದಿಗಳು ಇದು ಕಂದಾಯ ಇಲಾಖೆಗೆ ಸೇರಿದ ಭೂಮಿ ಎಂದಿದ್ದರು. ಈ ಬಗ್ಗೆ ಕೂಡಲೇ ಪರಿಶೀಲನೆ ನಡೆಸುತ್ತೆನೆ. ನಮ್ಮ ಸಿಬ್ಬಂದಿಗಳನ್ನು ಕೂಡಲೇ ಸ್ಥಳಕ್ಕೆ ಕಳುಹಿಸುತ್ತೆನೆ. ಅರಣ್ಯ ಭೂಮಿ ಒತ್ತುವರಿಯನ್ನು ಸಹಿಸುವ ಪ್ರಶ್ನೆಯೇ ಇಲ್ಲವೆಂದು ಡಿಸಿಎಫ್ ವಿ.ದೇವರಾಜು ಹೇಳುತ್ತಾರೆ.




