ಕೃಷಿಜಿಲ್ಲಾ ಸುದ್ದಿಬಾಗಲಕೋಟೆವಿಶೇಷ

ಕೊರೊನಾ ಹೊಡೆತದ ಬೆನ್ನಲ್ಲೇ ದಾಳಿಂಬೆ ಬೆಳೆಗಾರರಿಗೆ ಅಂಗಮಾರಿ, ದುಂಡಾಣು ರೋಗದ ಕಾಟ..!

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಗಾರರಿಗೆ ಕೊರೊನಾ, ಪ್ರವಾಹದ ಹೊಡೆತದಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಆದರೀಗ ದಾಳಿಂಬೆ ಬೆಳೆಗೆ ಹವಾಮಾನ ವೈಪರಿತ್ಯದಿಂದಾಗಿ ದಾಳಿಂಬೆ ಕಣಜದಲ್ಲಿ ಅಂಗಮಾರಿ ದುಂಡಾಣು ರೋಗದಿಂದ ದಾಳಿಂಬೆ ಬೆಳೆಗಾರರು ಕಂಗಾಲಾಗಿದ್ದಾರೆ.

ಕಲಾದಗಿ ಎಂದಾಕ್ಷಣವೇ ತಕ್ಷಣಕ್ಕೆ ನೆನಪಿಗೆ ಬರುವುದು ಹೆಜ್ಜೆ ಹೆಜ್ಜೆಗೂ ಕಾಣಿಸುವ ತೋಟಗಾರಿಕೆ ಬೆಳೆಗಳು. ಬಗೆ ಬಗೆಯ ಹಣ್ಣುಗಳು. ಅದರಲ್ಲೂ ಹೆಚ್ಚಿನ ರೈತರು ಬೆಳೆಯುವ ದಾಳಿಂಬೆ ತೋಟಗಳು. ಹಾಗಾಗಿಯೇ ಕಲಾದಗಿ ದಾಳಿಂಬೆ ಕಣಜವೆಂದು ಪ್ರಸಿದ್ಧಿ ಪಡೆದಿದೆ. ಕಲಾದಗಿ ಭಾಗದಲ್ಲಿ ಅರ್ಧ ಶತಮಾನಕ್ಕೂ ಮೊದಲೇ ರೈತರು ದಾಳಿಂಬೆ ಬೆಳೆಯುತ್ತಿದ್ದರು. ರಾಜ್ಯದ ಉಳಿದ ಕಡೆಗೆ ದಾಳಿಂಬೆ ಬೆಳೆಗೆ ಅಂಗಮಾರಿ ದುಂಡಾಣು ರೋಗ ದೊಡ್ಡಮಟ್ಟದಲ್ಲಿ ನಷ್ಟ ಮಾಡಿದ್ದರೂ ಕಲಾದಗಿ ಹೋಬಳಿಯ ದಾಳಿಂಬೆ ಬೆಳೆಗಾರರು ಮಾತ್ರ ಗಿಡಗಳನ್ನು ಸೇಫ್ ಮಾಡಿಕೊಂಡಿದ್ದರು. ಆದರೀಗ ಎರಡ್ಮೂರು ವರ್ಷಗಳಿಂದ ಇಲ್ಲಿಯೂ ಸಹ ಅಂಗಮಾರಿ ದುಂಡಾಣಿ ರೋಗ ದಾಳಿಂಬೆ ಬೆಳೆಯನ್ನು ಸಂಪೂರ್ಣ ಹಾಳು ಮಾಡುತ್ತಿದೆ. ಕಲಾದಗಿ, ಅಂಕಲಗಿ, ಗೋವಿಂದಕೊಪ್ಪ, ಹಿರೇಸಂಶಿ, ಚಿಕ್ಕಸಂಶಿ, ಕಾತರಗಿ ಸೇರಿದಂತೆ ಆ ಭಾಗದಲ್ಲಿ ಅಂಗಮಾರಿ ದೊಡ್ಡಮಟ್ಟದಲ್ಲಿ ದಾಳಿ ನಡೆಸಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಬೆಳೆಗಾಗಿ ಖರ್ಚು ಮಾಡಿದ್ದ ಲಕ್ಷ ಲಕ್ಷ ಹಣ ವಾಪಸ್ಸು ಬಾರದೇ ಸಾಲದ ಸುಳಿಗೆ ಸಿಲುಕುವಂತಾಗಿದೆ. ಇದು ದಾಳಿಂಬೆ ಬೆಳೆಗಾರರ ಜಂಘಾಬಲವನ್ನೆ ಕುಸಿಯುವಂತೆ ಮಾಡಿದೆ. ಅನೇಕ ಜಮೀನುಗಳಲ್ಲಿ ಶೇ. 90 ರಷ್ಟು ಹಣ್ಣು ಸಂಪೂರ್ಣ ಹಾಳಾಗಿದೆ. ಇದರಿಂದ ಅನೇಕರ ಗಿಡಗಳನ್ನು ಕಿತ್ತುಹಾಕಿದ್ದಾರೆ. ರೋಗಕ್ಕೆ ಸಿಲುಕಿದ ಹಣ್ಣು ಕಟ್ ಮಾಡಿ ಗ್ರಾಮದ ಹೊರವಲಯದಲ್ಲಿ ರಾಶಿ ರಾಶಿ ಗುಡ್ಡೆ ಹಾಕಿ ಸುಡುತ್ತಿದ್ದಾರೆ.

ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ 3 ಸಾವಿರ ಹೆಕ್ಟರ್ ಪ್ರದೇಶದಲ್ಲಿ ರೈತರು ದಾಳಿಂಬೆ ಬೆಳೆದಿದ್ದಾರೆ. ಪ್ರತಿ ಎಕರೆ ದಾಳಿಂಬೆ ಬೆಳೆಯಲು 3 ರಿಂದ 5 ಲಕ್ಷ ರೂ. ಗಳ ವರೆಗೂ ಖರ್ಚು ಮಾಡುತ್ತಾರೆ. ಎರಡು ವರ್ಷ ಬರೀ ದುಡ್ಡು ಹಾಕೋದೆ. ಆ ನಂತರದಲ್ಲಿ ದುಡ್ಡಿನ ಮುಖ ನೋಡಬೇಕು. ಇದೀಗ ಹೊಸದಾಗಿ ದಾಳಿಂಬೆ ಗಿಡ ಹಚ್ಚಿದ ಅನೇಕ ರೈತರು ಬ್ಯಾಂಕ್ ಗಳಲ್ಲಿ ಲಕ್ಷ ಲಕ್ಷ ಸಾಲ ಮಾಡಿದ್ದೆ ಬಂತು. ಇದೀಗ ಆದಾಯ ಶುರುವಾಗುತ್ತೆ ಅನ್ನುವಷ್ಟರಲ್ಲಿ ಅಂಗಮಾರಿ ದಾಳಿಂಬೆ ಬೆಳೆಗಾರರ ಕನಸುಗಳನ್ನು ನುಚ್ಚುನೂರು ಮಾಡಿ, ಅವರ ಬದುಕಿನಲ್ಲಿ ಚಲ್ಲಾಟವಾಡುತ್ತಿದೆ. ಕಲಾದಗಿ ಭಾಗದಲ್ಲಿ ಬಹುತೇಕವಾಗಿ ದಾಳಿಂಬೆ ಬೆಳೆಯುವ ರೈತರಿಗೆ ಇದೀಗ ಎರಡ್ಮೂರು ವರ್ಷದಿಂದ ಬರೀ ಲಾಸ್ ಎನ್ನುವಂತಾಗಿದೆ.

ಕೊರೊನಾಗಿಂತಲೂ ವೇಗವಾಗಿ ಹರಡುವ ಅಂಗಮಾರಿ ದುಂಡಾಣು ರೋಗದಿಂದ ದಾಳಿಂಬೆ ಗಿಡ ಮತ್ತು ಹಣ್ಣು ಉಳಿಸಿಕೊಳ್ಳಲಾಗದೇ ರೈತರು ದಿಕ್ಕುತೋಚದಾಗಿದ್ದಾರೆ. ಇದೀಗ ಸರ್ಕಾರ ನೆರವಿಗೆ ಬಾರದೇ ಇದ್ದರೆ ರೈತರ ಪರಿಸ್ಥಿತಿ ಅಧೋಗತಿಗೆ ಹೋಗಲಿದೆ. ಸರ್ಕಾರ ದಾಳಿಂಬೆ ಬೆಳೆಗಾರರು ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು. ಮತ್ತೆ ದಾಳಿಂಬೆ ಬೆಳೆಯಲು ಪ್ರೋತ್ಸಾಹ ನೀಡಬೇಕು. ಇಲ್ಲವಾದಲ್ಲಿ ಈ ದುಭಾರಿ ಕಾಲದಲ್ಲಿ ರೈತರು ಮತ್ತು ದಾಳಿಂಬೆ ಬೆಳೆಯಲು ಆಗಲ್ಲ. ಅನೇಕ ರೈತರ ಜೀವನವೇ ಮುಳುಗಿಹೋಗುತ್ತಿದೆ. ಪ್ರತಿಯೊಬ್ಬ ದಾಳಿಂಬೆ ಬೆಳೆಗಾರರ ಕನಿಷ್ಠ ಐದಾರು ಲಕ್ಷ ರೂ. ಹಾನಿ ಅನುಭವಿಸುವಂತಾಗಿದೆ ಎಂದು ಚಿಕ್ಕ ಸಂಶಿ ಗ್ರಾಮದ ದಾಳಿಂಬೆ ಬೆಳೆಗಾರ ಕೃಷ್ಣಾ ಸಾಲಾಪೂರ ಹೇಳುತ್ತಿದ್ದಾರೆ.

ಹಣ್ಣಿನ ಕಣಜ ಖ್ಯಾತಿಯ ಕಲಾದಗಿ ಹೋಬಳಿಯ ದಾಳಿಂಬೆ ಬೆಳೆಗಾರರು ತೀವ್ರ ಆತಂಕದಲ್ಲಿ ಇದ್ದಾರೆ. ಬೆಳೆದು ನಿಂತಿದ್ದು, ಇನ್ನೇನು ಆದಾಯ ಬರುತ್ತೆ ಎನ್ನುವಷ್ಟರಲ್ಲಿ ಅಂಗಮಾರಿ ದುಂಡಾಣು ರೋಗ ಬೆಳೆಯನ್ನು ನುಂಗಿ ಹಾಕಿದೆ. ದಿಕ್ಕು ತೋಚದೇ ಕಂಗಾಲಾಗಿರುವ ದಾಳಿಂಬೆ ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಬರಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button