ರಸ್ತೆ ಬದಿಯ ಡಬ್ಬಿ ಅಂಗಡಿಗಳ ವಿರುದ್ಧ ಪಾಲಿಕೆ ಕಾರ್ಯಾಚರಣೆ

ಧಾರವಾಡ: ರಸ್ತೆ ಬದಿಯಲ್ಲಿ ಡಬ್ಬಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದವರ ವಿರುದ್ಧ ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ರಸ್ತೆ ಬದಿಯ ಡಬ್ಬಿ ಅಂಗಡಿಗಳನ್ನು ತೆರವು ಮಾಡಿದರು.
ಸುತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಬದಿಯಲ್ಲಿ ಡಬ್ಬಿ ಅಂಗಡಿಗಳ ವಿರುದ್ಧ ಪಾಲಿಕೆ ಅಧಿಕಾರಿಗಳು ಪೌರ ಕಾರ್ಮಿಕರನ್ನು ಬಳಸಿಕೊಂಡು ಕಾರ್ಯಾಚರಣೆ ಮಾಡಿದ್ರು. ಎರಡು ರಸ್ತೆಯ ಬದಿಯ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಂಗಡಿಗಳನ್ನು ತೆರವು ಮಾಡಿದರು.
ಅಂಗಡಿಗಳ ತೆರವಿಗೆ ಪಾಲಿಕೆ ಅಧಿಕಾರಿಗಳು ಮುಂದಾಗುತ್ತಿದಂತೆ ಕೆಲವು ಅಂಗಡಿ ಮಾಲೀಕರು ಪಾಲಿಕೆಯ ಅಧಿಕಾರಿಗಳಿಗೆ ತೆರವು ಮಾಡದಂತೆ ಮನವಿ ಮಾಡಿದರು. ಈ ವೇಳೆ ಕೆಲವು ಸ್ಥಳೀಯರ ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದ್ದು, ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪಾಲಿಕೆ ಅಧಿಕಾರಿಗಳು ಕೊನೆಗೂ ರಸ್ತೆ ಬದಿಯ ಅನಧಿಕೃತ ಅಂಗಡಿಗಳನ್ನು ತೆರವು ಮಾಡಿದ್ದಾರೆ.
ತೆರವು ಮಾಡಿದ ಅಂಗಡಿಗಳನ್ನು ಪಾಲಿಕೆಯ ತ್ಯಾಜ್ಯ ವಿಲೇವಾರಿ ವಾಹನದ ಮೂಲಕ ಪಾಲಿಕೆ ಆವರಣಕ್ಕೆ ಕಳುಹಿಸಿಕೊಟ್ಟಿರುವ ಅಧಿಕಾರಿಗಳು, ಮತ್ತೆ ಇಲ್ಲಿ ಯಾರು ಕೂಡಾ ಅನಧಿಕೃತವಾಗಿ ಡಬ್ಬಾ ಅಂಗಡಿಗಳನ್ನು ಇಡದಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ.
