ಚಳಿ ಜ್ವರಕ್ಕೆ ಹಾಸಿಗೆ ಹಿಡಿಯುತ್ತಿರುವ ಜನರು

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಕೊರೋನಾ ಅಬ್ಬರ ಜೋರಾಗಿದೆ.ಸಾವಿರದ ಗಡಿಯಲ್ಲಿ ಕೋವಿಡ್ ಪ್ರಕರಣಗಳು ಕಂಡು ಬರುತ್ತಿದ್ದು,ಸಾಕಷ್ಟು ಆತಂಕ ಸೃಷ್ಟಿಸಿದೆ.
ಜಿಲ್ಲಾಡಳಿತ ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳ ಪಾಲನೆಗೆ ಕ್ರಮ ಕೈಗೊಂಡರೂ ಕೋವಿಡ್ ಸಂಖ್ಯೆ ಮಾತ್ರ ಇಳಿಕೆ ಕಾಣುತ್ತಿಲ್ಲ.ಇದರ ನಡುವೆ ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಜ್ವರ,ನೆಗಡಿ,ಕೆಮ್ಮಿನಂತಹ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ.ಪರಿಣಾಮ ನಗರ ಪ್ರದೇಶಗಳಲ್ಲಿ ಪ್ಯಾರಾಸಿಟಾಮಮಲ್ ಡೋಲೋ – 650 ನಂತಹ ಮೆಡಿಸಿನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಲ್ಲಿ ಚಳಿಯ ವಾತಾವರಣವಿದ್ದು,ಈ ಬಾರಿ ಕರಾವಳಿ ತಾಲೂಕುಗಳಲ್ಲೂ ಸಹ ಹಿಂದೆಂದಿಗಿಂತ ಹೆಚ್ಚು ಚಳಿ ಬೀಳುತ್ತಿದೆ. ಇದರಿಂದಾಗಿ ಒಂದೆಡೆ ಕೊರೋನಾ ಭೀತಿಯ ನಡುವೆ ನೆಗಡಿ,ಕೆಮ್ಮು,ಜ್ವರದ ಲಕ್ಷಣಗಳು ಬಹುತೇಕರಲ್ಲಿ ಕಂಡು ಬರುತ್ತಿದೆ.ಇದು ಒಬ್ಬರಿಂದ ಇನ್ನೊಬ್ಬರಿಗೆ ಬೇಗನೆ ಹರಡುತ್ತಿದೆ.
ಬಹುತೇಕ ಎಲ್ಲರ ಮನೆಗಳಲ್ಲೂ ಇಂತಹ ಲಕ್ಷಣಗಳ ಜನರು ಕಂಡು ಬರುವಂತಾಗಿದ್ದು,ಇಂಥವರು ಆಸ್ಪತ್ರೆಗಳಿಗೆ ತೆರಳುವ ಬದಲು ಮೆಡಿಕಲ್ ಶಾಪ್ ಗಳ ಮೊರೆ ಹೋಗುತ್ತಿದ್ದಾರೆ.ಇದರಿಂದಾಗಿ ಕಳೆದೊಂದು ವಾರದಿಂದ ಡೋಲೋ 650, ಪ್ಯಾರಾಸಿಟಾಮಲ್ ಮಾತ್ರೆಗಳಿಗೆ ಬೇಡಿಕೆ ಹೆಚ್ಚಾಗಿದ್ದು,ನಗರ ಪ್ರದೇಶದ ಮೆಡಿಕಲ್‌ವೊಂದರಲ್ಲೇ ದಿನಕ್ಕೆ 200 ರಿಂದ 250 ಮಾತ್ರೆಗಳು ಮಾರಾಟವಾಗುತ್ತಿವೆ.
ಹೀಗಾಗಿ ಹೋಂ ಐಸೋಲೇಶನ್‌ನಲ್ಲಿ ಹೆಚ್ಚಿನವರು ಇರುವುದರಿಂದಾಗಿಯೇ ನಗರದಲ್ಲಿ ಜ್ವರ,ನೆಗಡಿ,ಕೆಮ್ಮಿನಂತಹ ಲಕ್ಷಣಗಳು ಜನರಲ್ಲಿ ಕಂಡು ಬರುತ್ತಿದ್ದು, ಕೊರೋನಾ ಸೋಂಕು ಸಮುದಾಯಕ್ಕೂ ಹಬ್ಬುತಿದೆಯಾ ? ಅನ್ನೋ ಆತಂಕ ಜನರಲ್ಲಿ ಮನೆ ಮಾಡುವಂತಾಗಿದೆ.




