ಜಿಲ್ಲಾ ಸುದ್ದಿರಾಮನಗರ

ಒಂದು ಕೋಟಿ ಸದಸ್ಯತ್ವ ನೋಂದಣಿ ಗುರಿ: ಡಾ.ಮಹೇಶ್‌ಜೋಷಿ

ರಾಮನಗರ: ಸಾಹಿತ್ಯ ಪರಿಷತ್‌ನ್ನು ಸಾಮಾನ್ಯರ ಪರಿಷತ್ ಮಾಡೋಣ, ರಾಮನಗರ ಜಿಲ್ಲೆ ಸಾಹಿತ್ಯ ಮತ್ತು ಇತರ ಕ್ಷೇತ್ರಗಳ ಅಭಿವೃದ್ಧಿಯ ವೈವಿಧ್ಯಮಯವಾದ ಜಿಲ್ಲೆಯಾಗಿದ್ದು. ರಾಜ್ಯ ಹಾಗೂ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಜನರ ಬಳಿ ಕೊಂಡೊಯ್ಯಲು ನಮ್ಮ ಸಾಹಿತ್ಯ ಪರಿಷತ್ ತಂಡ ಶಕ್ತಿಮೀರಿ ಶ್ರಮಿಸುವುದಾಗಿ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದರು.

ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೇಂದ್ರದ ಕಚೇರಿಗೆ ಅವರು ಆಗಮಿಸಿ ಜಿಲ್ಲಾ ಅಧ್ಯಕ್ಷರಿಗೆ ಪದಗ್ರಹಣ ಮಾಡಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿ ನಮ್ಮ ಚಿಂತನೆಗಳು ಮತ್ತು ಉದ್ದೇಶಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಕನ್ನಡವನ್ನು ಉಳಿಸಿ ಎಂದು ಮಾತನಾಡುವುದು ಬೇಡ. ಏಕೆಂದರೆ ಕನ್ನಡ ಭಾಷೆ ರಾಜ್ಯದಲ್ಲಿ ಹೀನಾಯ ಸ್ಥಿತಿ ತಲುಪಿಲ್ಲ. ಹಾಗಾಗಿ ನಾವು ಕನ್ನಡವನ್ನು ಬೆಳೆಸುವ ಕೆಲಸ ಮಾಡೋಣ ಎಂದರು.

ಸ್ಮಾರಕ ನಿರ್ಮಿಸುವ ಭರವಸೆ:

ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಸರ್.ಎಂ ವಿಶ್ವೇಶ್ವರಯ್ಯ ಕಟ್ಟಿದ ಪರಿಷತ್‌ನಲ್ಲಿ ಮೊದಲ ಮೂರು ಅವಧಿಗೆ ಅಧ್ಯಕ್ಷರಾಗಿದ್ದ ಮಾಗಡಿ ತಾಲೂಕಿನ ಹೆಚ್.ವಿ ನಂಜುಂಡಯ್ಯ ಹೆಸರನ್ನು ಉಳಿಸಲು ಅವರ ವಂಶಜರಿರುವ ತಿಪ್ಪಸಂದ್ರದ ಹೆಬ್ಬಳಲಲ್ಲಿ ಸ್ಮಾರಕ ನಿರ್ಮಾಣಮಾಡುವ ಕೆಲಸ ಮಾಡುತ್ತೇವೆ. ಜತೆಗೆ ರಾಜ್ಯದಲ್ಲಿ 1 ಕೋಟಿಗೂ ಹೆಚ್ಚಿನ ಪರಿಷತ್ ಸದಸ್ಯತ್ವ ನೋಂದಾಯಿಸಲು ಗುರಿಯಿಟ್ಟುಕೊಂಡು ಕೆಲಸಮಾಡಿ ಕ್ರಾಂತಿಕಾರಕ ಬದಲಾವಣೆ ತರೋಣ ಸಹಕರಿಸಿ ಜಿಲ್ಲೆಗೆ ಸಾಹಿತ್ಯ ಚಟುವಟಿಕೆ ನಡೆಸಲು ಅಗತ್ಯ ಸಹಕಾರ ನೀಡಿ ಕನ್ನಡ ಕಟ್ಟುವ ಕೆಲಸ ಮಾಡೋಣ ಎಂದರು.

ಕನ್ನಡ ಭವನಕ್ಕೆ ಮೊರೆ:

ಜಿಲ್ಲಾಧ್ಯಕ್ಷ ಬಿ.ಟಿ ನಾಗೇಶ್ ಕನ್ನಡ ಸಾಹಿತ್ಯ ಪರಿಷತ್ ಧ್ವಜವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಂದ ಸ್ವೀಕರಿಸಿ ಮಾತನಾಡಿ, ರಾಮನಗರ ಜಿಲ್ಲೆಯ ಕವಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಸಹಕಾರ ನೀಡಬೇಕು ಹಾಗೂ ಕೇಂದ್ರ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ರಾಮನಗರ ಜಿಲ್ಲೆಯಲ್ಲಿ ನಡೆಸುವಂತೆ ಮನವಿ ಮಾಡಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್ ಮಾತನಾಡಿದರು. ಸರಳ ಸಮಾರಂಭದ ಬಳಿಕ ಮಾಗಡಿ, ಚನ್ನಪಟ್ಟಣ, ಕನಕಪುರ, ರಾಮನಗರ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರ ಜೊತೆ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆ ಆಯೋಜನೆ ಬಗ್ಗೆ ಮತ್ತು ಅಭಿವೃದ್ಧಿ ಕುರಿತು ಸುಧೀರ್ಘ ಚರ್ಚೆ ನಡೆಸಲಾಯಿತು.

ಸಮ್ಮೇಳನ ನಡೆಸಲು ಭರವಸೆ:

ರಾಮನಗರ ಜಿಲ್ಲೆ ರಾಜ್ಯ ರಾಜಧಾನಿಗೆ ಹತ್ತಿರವಾಗಿದೆ ಮೂರು ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ಕೊಡುಗೆ ಕೊಟ್ಟಿದೆ. ಜಿಲ್ಲೆಯಾಗಿ 15 ವರ್ಷವಾಗಿದೆ. ಜತೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಬೇಕಿರುವ ಎಲ್ಲಾ ಮೂಲಭೂತ ಸೌಕರ್ಯಗಳು ಈ ಜಿಲ್ಲೆಯಲ್ಲಿದ್ದು ಕಾರ್ಯಕಾರಿಣಿ ಸಮಿತಿಯಲ್ಲಿ ರಾಮನಗರ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವ ಬಗ್ಗೆ ವಿಷಯ ಪ್ರಸ್ತಾಪಿಸಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಜೋಷಿ ಭರವಸೆ ಕೊಟ್ಟರು.

Spread the love

Related Articles

Leave a Reply

Your email address will not be published. Required fields are marked *

Back to top button