ಕೊನೆಗೂ ನವನಗರ ಎಪಿಎಂಸಿ ಠಾಣೆಯ ಇನ್ಸ್ಪೆಕ್ಟರ್ ಅಧಿಕಾರ ಸ್ವೀಕಾರ

ಹುಬ್ಬಳ್ಳಿ: ಹಲವು ವಿವಾದಗಳಿಂದಲ್ಲೇ ಹೆಸರಾಗಿದ್ದ ಹುಬ್ಬಳ್ಳಿಯ ನವನಗರದ ಎಪಿಎಂಸಿ ಪೊಲೀಸ್ ಠಾಣೆಗೆ ಹೊಸ ಪೊಲೀಸ್ ಇನ್ಸ್ಪೆಕ್ಟರ್ ಆಗಮನವಾಗಿದೆ. ವರ್ಗಾವಣೆಯಾಗಿ ಒಂದು ವಾರ ಕಳೆದ ಬಳಿಕ ಬಾಳಪ್ಪ ಮಂಟೂರವರು ಈಗ ಠಾಣೆಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ವಾರವೇ ಸರಕಾರದ ಆದೇಶವಾಗಿದ್ದರೂ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಠಾಣೆಗೆ ಬಂದು ಹಾಜರಾಗಿರಲಿಲ್ಲ. ಕೆಲವರ ಪ್ರಕಾರ ಇವರು ಠಾಣೆಗೆ ಬರೋದಿಲ್ಲವೆಂದು ಹೇಳಲಾಗಿತ್ತು. ಆದರೆ, ಇಂದು ಆಗಮಿಸಿ ತಮ್ಮ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ನವನಗರದ ಎಪಿಎಂಸಿ ಪೊಲೀಸ್ ಠಾಣೆ ಒಂದಲ್ಲಾ ಒಂದು ರಗಳೆಯನ್ನ ಎದುರಿಸುತ್ತಲೇ ಬಂದಿದೆ. ಈ ಹಿಂದೆ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭು ಸೂರಿನ್‌ರವರು ವಕೀಲರೊಬ್ಬರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಮಾಡಿದರು. ಆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಪ್ರಕರಣದ ಕುರಿತಂತೆ ಮೇಲಾಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವ ಮಟ್ಟಿಗೆ ಹೋಗಿ ಕೊನೆಗೆ ಇನ್ಸ್ಪೆಕ್ಟರ್ ಪ್ರಭು ಸೂರಿನರವರನ್ನು ಕಲಘಟಗಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ಪ್ರಭು ಸೂರಿನ ವರ್ಗಾವಣೆಯ ಬಳಿಕ ಠಾಣೆಗೆ ಚೌಕಲೆ ಅವರನ್ನು ಇನ್ಸ್ಪೆಕ್ಟರ್ ಆಗಿ ನಿಯೋಜನೆ ಮಾಡಲಾಗಿತ್ತು, ಆದರೆ ಇವರನ್ನು ನವನಗರ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಪ್ರಕರಣದ ತನಿಖೆಯೊಂದರಲ್ಲಿ ಕರ್ತವ್ಯ ಲೋಪದಡಿಯಲ್ಲಿ ಅಮಾನತ್ತು ಮಾಡಲಾಗಿತ್ತು. ಚೌಗಲೆ ಅವರು ಹೋದ ನಂತರ ಎಪಿಎಂಸಿ ಪೊಲೀಸ್ ಠಾಣೆಗೆ ಖಾಯಂ ಇನ್ಸಪೆಕ್ಟರ್ ಇರಲೇ ಇಲ್ಲಾ. ಆದರೆ ಈಗ ನಿಯೋಜನೆಗೊಂಡ ವಾರದ ಬಳಿಕ ಠಾಣೆಗೆ ಬಾಳಪ್ಪ ಮಂಟೂರವರು ಆಗಮಿಸಿ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.




