ಶಿರಸಿ : ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ

ಕಾರವಾರ : ಬಸ್ ನಲ್ಲಿ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯೋರ್ವಳು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ ಚೀಲವನ್ನು ತೆರೆದಾಗ ಆ ಚೀಲದಲ್ಲಿ ನವಜಾತ ಗಂಡು ಮಗು ದೊರೆತ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗೌಡಳ್ಳಿ ಸಮೀಪದ ಖಾನ್ ನಗರದ ಬಸ್ ತಂಗುದಾಣದಲ್ಲಿ ನಡೆದಿದೆ.
ತಾಲೂಕಿನ ಕೂಗಿಲಕುಳಿ ಗ್ರಾಮದ ಮಾದೇವಿ ಎಂಬುವರಿಗೆ ಈ ಮಗು ದೊರೆತಿದ್ದು,ಈ ಮಗುವನ್ನು ಶಿರಸಿಯ ಸಹಾಯ ಟ್ರಸ್ಟ್ ಗೆ ಹಸ್ತಾಂತರಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷ ಸತೀಶ ಶೆಟ್ಟಿ ಅನಾರೋಗ್ಯಕ್ಕೆ ತುತ್ತಾಗಿರುವ ಮಗುವನ್ನು ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಮಗುವಿಗೆ ಮಕ್ಕಳ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೂಲಿ ಕೆಲಸಕ್ಕೆ ಪ್ರತಿ ದಿನದಂತೆ ಇಂದು ಬಸ್ ನಲ್ಲಿ ಹೋಗುವಾಗ ತಂಗುದಾಣದಲ್ಲಿ ಚೀಲ ಪತ್ತೆಯಾಗಿದೆ.ಯಾರೋ ಮರೆತು ಬಿಟ್ಟು ಹೋಗಿರಬೇಕು ಎಂದು ಆ ಚೀಲವನ್ನು ಮಾದೇವಿ ಸನಿಹದಲ್ಲೇ ಇರುವ ತನ್ನ ಮನೆಗೆ ತಂದು ನೋಡಿದ್ದಾಳೆ. ಈ ವೇಳೆ ಚೀಲ ಬಿಚ್ಚುತ್ತಿದ್ದಂತೆ ಮಗು ಅಳುವುದು ಕೇಳಿಸಿದ್ದು, ಭಯಗೊಂಡ ಮಹಿಳೆ ಸ್ಥಳೀಯರಿಗೆ ಮಾಹಿತಿ ನೀಡಿ ನಂತರ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಮಗುವನ್ನು ರಕ್ಷಣೆ ಮಾಡಲಾಗಿದೆ.
ಅವಧಿ ಪೂರ್ವ ಜನಿಸಿದ ಶಿಶು ಇದಾಗಿದ್ದು, 1.6 ಕೆಜಿ ತೂಕ ಹೊಂದಿದೆ. ಜನಿಸಿ ನಾಲ್ಕು ದಿನ ಆಗಿರುವ ಸಾಧ್ಯತೆಗಳಿವೆ. ಮಗುವಿನ ಎಡಗೈ ಮುಂಭಾಗದ ಮೂಳೆ ಬೆಳವಣಿಗೆ ಕುಂಠಿತವಾಗಿದ್ದು, ಆರು ಬೆರಳನ್ನು ಹೊಂದಿದೆ. ಗಾಳಿ, ಮಳೆಯ ವಾತಾವರಣದಲ್ಲಿದ್ದ ಕಾರಣ ಮಗುವಿನ ಆರೋಗ್ಯ ಹದಗೆಟ್ಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪ್ರಕರಣ ಸಹ ದಾಖಲಾಗಿದ್ದು, ಮಗುವಿನ ಪೋಷಕರ ಪತ್ತೆಗೆ ಪ್ರಯತ್ನ ನಡೆಯುತ್ತಿದೆ.




