ದಸರಾಗೂ ಮುನ್ನ ದಶಪಥ ಹೆದ್ದಾರಿ ಸಂಚಾರಕ್ಕೆ ಮುಕ್ತ

ರಾಮನಗರ: ವಿಶ್ವದರ್ಜೆಯ ಗುಣಮಟ್ಟದೊಂದಿಗೆ ನಿರ್ಮಾಣವಾಗುತ್ತಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಮುಂಬರುವ ದಸರ ವೇಳೆಗೆ ಲೋಕಾರ್ಪಣೆಗೊಳ್ಳಲಿದ್ದು, ಸಂಚಾರಕ್ಕೆ ಮುಕ್ತವಾಗಲಿದೆ. ಸಾಕಷ್ಟು ಸಮಯದಿಂದ ಕಾದಿದ್ದ ಸಾರ್ವಜನಿಕರಿಗೆ ಇದೀಗ ದಶಪಥ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿರೋದು ಸಂತಸಕ್ಕೆ ಕಾರಣವಾಗಿದೆ.
ದಶಪಥ ಹೆದ್ದಾರಿ ರಾಷ್ಟ್ರಕ್ಕೆ ಸಮರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಉನ್ನತ ಮಟ್ಟದ ಸಭೆಯಲ್ಲಿ ಕಾಮಗಾರಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ಕಲೆ ಹಾಕಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆ ಸಂಸ್ಥೆ ನೀಡಿರುವ ಮಾಹಿತಿಯನ್ವಯ 117 ಕಿಮೀ ಉದ್ದದ ಹೆದ್ದಾರಿ ಕಾಮಗಾರಿ ಪೂರ್ಣಕ್ಕೆ 2022ರ ವರ್ಷಾಂತ್ಯದವರೆಗೂ ಕಾಲಮಿತಿ ಇತ್ತು. ಆದರೆ ದಸರಾಗೂ ಮುನ್ನವೇ ಪೂರ್ಣಗೊಳ್ಳುತ್ತಿರೋದಾಗಿ ದೃಢಪಡಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಕೆಲ ಕಾಲ ಯೋಜನೆಯ ಕಾಮಗಾರಿ ವಿಳಂಬವಾಗಿತ್ತಾದರೂ ರಾಜ್ಯ ಸರ್ಕಾರದ ಒತ್ತಡದ ಮೇರೆಗೆ ಕಾಮಗಾರಿ ಕಾರ್ಯ ಚುರುಕುಗತಿಯಿಂದ ನಡೆಯುತ್ತಿದೆ. ಬೆಂಗಳೂರು-ಮೈಸೂರು ನಡುವಣ ಬಹುತೇಕ ನಗರಗಳನ್ನು ಪ್ರವೇಶಿಸಲು ಈ ರಸ್ತೆಯಿಂದ ಸಾಧ್ಯವಾಗಲಿದ್ದು, ಒಂದೂವರೆ ಗಂಟೆಯಲ್ಲಿ ಉಭಯ ನಗರಗಳನ್ನು ಸಂಪರ್ಕಿಸ ಬಹುದಾಗಿದೆ.
ಬೆಂಗಳೂರಿನಿಂದ ಪ್ರಯಾಣಿಸುವವರು ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ ನಗರಗಳನ್ನ ಪ್ರವೇಶಿಸಬೇಕಿಲ್ಲ. ಮದ್ದೂರಿನಲ್ಲಿ ಫ್ಲೈ ಓವರ್ ದಾಟಿ ಹೋಗಬಹುದಾಗಿದೆ. ಒಂದೂವರೆ ಗಂಟೆಯಲ್ಲಿ ಉಭಯ ನಗರಗಳನ್ನು ಸಂಪರ್ಕಿಸಲು ಸಾಧ್ಯವಾಗುವ ಈ ದಶಪಥ ರಸ್ತೆಯಲ್ಲಿ ನಿರ್ದಿಷ್ಟ ಪ್ರಮಾಣದ ಆರ್ಥಿಕ ಚಟುವಟಿಕೆಗಳಿಗೆ ಮಾತ್ರವೆ ಅವಕಾಶ ನೀಡಲಾಗುತ್ತದೆ.
ಎರಡು ಹಂತದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಬಹುತೇಕ ಶೇಕಡ 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಅದರಲ್ಲೂ ಬೈಪಾಸ್ ರಸ್ತೆ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ಮೇಲ್ಸೆತುವೆ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಉಳಿದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅನುಮತಿ ನೀಡಿತ್ತು. ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇದನ್ನ ವಿಶ್ವ ದರ್ಜೆ ಮಟ್ಟಕ್ಕೆ ಹೆಚ್ಚಿಸಲು ಹಾಗೂ 24 ತಿಂಗಳೊಳಗೆ ಪೂರ್ಣಗೊಳಿಸಲು ಗಡವು ಕೊಟ್ಟು, ಉತ್ತರ ಭಾರತ ಮೂಲದ ಗುತ್ತಿಗೆದಾರರಿಗೆ ಕಾಮಗಾರಿ ನೀಡಿತ್ತು. ಎಷ್ಟೇ ಅಡೆತಡೆಗಳು ಬಂದರೂ, ಗುತ್ತಿಗೆದಾರರು ಕಾಮಗಾರಿಯನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಒತ್ತಡವೂ ಇದೆ.
ಯೋಜನೆಯ ಕಾಮಗಾರಿಗೆ ಶುರುವಿನಲ್ಲಿ ಭೂ ಸ್ವಾಧೀನ ಕಾರ್ಯಕ್ಕೆ ತೊಡಕಾಗಿತ್ತು. ಇದು ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದ್ದನ್ನು ಸ್ಮರಿಸಬಹುದು.



