ಲಾಕ್ ಡೌನ್ ವೇಳೆ ರೋಗಿಗಳ ಆರೈಕೆ ಮಾಡುತ್ತಿರುವ ಭಟ್ಕಳದ ಮೊಬೈಲ್ ಕ್ಲಿನಿಕ್

ಭಟ್ಕಳ : ಲಾಕ್ ಡೌನ್ ಸಂದರ್ಭದಲ್ಲಿ ಜನರು ರಸ್ತೆ ಗಿಳಿಯುವುದು ಸಾಧ್ಯವಿಲ್ಲ ಎಂಬ ಕಷ್ಟದ ಜೊತೆಗೆ ಕೊರೋನಾ ಕಾಟವೂ ಜನರನ್ನು ಕಾಡುತ್ತಿದೆ. ಜ್ವರ ಅಥವಾ ಇತರ ಲಕ್ಷಣಯುತ ರೋಗಗಳು ಕಂಡುಬಂದಾಗ ಹೊರಗಿನ ಆಸ್ಪತ್ರೆಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಈ ಭಯ, ಗೊಂದಲಗಳ ನಡುವೆ ಭಟ್ಕಳದ ಜನರಿಗೆ ಆಫತ್ಬಾಂಧವನಂತೆ ಮೊಬೈಲ್ ಕ್ಲಿನಿಕ್ ಒಂದು ಕಾರ್ಯಾಚರಿಸುತ್ತಿದೆ.
ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್ – ವ – ತಂಜೀಮ್ ಸಂಸ್ಥೆ,ರಾಬಿತಾ ಸೊಸೈಟಿ,ಇಂಡಿಯನ್ ನವಾಯತ್ ಫೋರಮ್ ಮತ್ತು ಭಟ್ಕಳ ಮುಸ್ಲಿಂ ಯೂತ್ ಪೆಡರೇಶನ್ ಜಂಟಿ ಆಶ್ರಯದಲ್ಲಿ ಕಳೆದ 15 ದಿನಗಳಿಂದ ಮೊಬೈಲ್ ಕ್ಲಿನಿಕ್ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದೆ.ಅನಾರೋಗ್ಯ ಪೀಡಿತರ ಮನೆ ಬಾಗಿಲಿಗೆ ನುರಿತ ವೈದ್ಯಕೀಯ ತಂಡ ತೆರಳಿ ಪರೀಕ್ಷೆ ನಡೆಸಿ,ಚಿಕಿತ್ಸೆ ನೀಡುತ್ತಿದೆ.
ಈ ಮೊಬೈಲ್ ಕ್ಲಿನಿಕ್ ನಲ್ಲಿ ಓರ್ವ ವೈದ್ಯ,ಓರ್ವ ನರ್ಸ್, ಫಾರ್ಮಾಸಿಸ್ಟ್ ಜೊತೆಗೆ ಅತ್ಯವಶ್ಯಕ ವಸ್ತುಗಳಾದ ಆಮ್ಲಜನಕ ಮತ್ತಿತರ ಪರಿಕರಗಳ ಅವಶ್ಯಕತೆಗಳನ್ನು ಪರೀಕ್ಷಿಸಲು ಪ್ರತ್ಯೇಕ ಸಹಾಯಕರೋರ್ವರನ್ನು ನಿಯೋಜಿಸಲಾಗಿದೆ.
ಆಯಾ ಭಾಗದ ಕ್ರೀಡಾ ಸಂಘದ ಯುವಕರು, ಮುಖಂಡರು ತಮ್ಮ ಭಾಗದ ಅನಾರೋಗ್ಯ ಪೀಡಿತರ ಬಗ್ಗೆ ಮೊಬೈಲ್ ಕ್ಲಿನಿಕ್ ಗೆ ಮಾಹಿತಿ ನೀಡುತ್ತಿದ್ದಾರೆ. ವೈದ್ಯರ ವಾಹನ ರೋಗಿಗಳ ಮನೆ ಬಾಗಿಲಿಗೆ ಬರುತ್ತಿರುವುದರಿಂದ ತಾಲೂಕಿನ ಯಾವುದೇ ಭಾಗದ ಜನರು ಉಚಿತವಾಗಿ ಮೊಬೈಲ್ ಕ್ಲಿನಿಕ್ ನ ನೆರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡು ಬಂದಲ್ಲಿ ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸುವ ಏರ್ಪಾಡನ್ನು ಮಾಡಿಕೊಳ್ಳಲಾಗಿದೆ.
ಪ್ರತಿ ದಿನ ಬೆಳಿಗ್ಗೆ 11 – 30 ರಿಂದ 1 -30 ಹಾಗೂ ಸಂಜೆ 4 – 30 ರಿಂದ 7 ಘಂಟೆಯ ಅವಧಿಯಲ್ಲಿ ಮೊಬೈಲ್ ಕ್ಲಿನಿಕ್ ಸೌಲಭ್ಯ ಲಭ್ಯವಿದೆ.ತಾಲೂಕಿನ ಯಾವುದೇ ಭಾಗದ ಜನರು ದೂರವಾಣಿ ಕರೆಯ ಮೂಲಕ ಕ್ಲಿನಿಕ್ ಸೇವೆಯನ್ನು ಪಡೆಯಬಹುದಾಗಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಮೌಲಾನಾ ಅಝೀಝರಹಮಾನ್ ರುಕ್ನುದ್ದೀನ್ ನದ್ವಿ 10 ದಿನಗಳ ಅವಧಿಯಲ್ಲಿ ಮೊಬೈಲ್ ಕ್ಲಿನಿಕ್ ಸರಿ ಸುಮಾರು 500 ಜನರಿಗೆ ನೆರವು ನೀಡಿದೆ.ತಾಲೂಕಿನ ಯುವಕರು,ಯುವಕ ಸಂಘದ ಪ್ರತಿನಿಧಿಗಳು ತಮ್ಮ ತಮ್ಮ ಭಾಗದ ಅನಾರೋಗ್ಯ ಪೀಡಿತರ ಬಗ್ಗೆ ಮಾಹಿತಿಯನ್ನು ಕ್ರೋಡೀಕರಿಸಿಕೊಂಡು ನಮಗೆ ನೀಡಿದರೆ ಸಾಮೂಹಿಕವಾಗಿ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.






